ಕರ್ತವ್ಯ ಲೋಪವೆಸಗಿದ 35 BLOಗಳಿಗೆ ಶೋಕಾಸ್ ನೋಟಿಸ್: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳಿಕೆ

 

ಕರ್ತವ್ಯ ಲೋಪವೆಸಗಿದ 35 BLOಗಳಿಗೆ ಶೋಕಾಸ್ ನೋಟಿಸ್: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಫಾರಂ ವಿತರಣಾ ಕಾರ್ಯದಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ 35 ಬಿಎಲ್‌ಒ (ಮತಗಟ್ಟೆ ಮಟ್ಟದ ಅಧಿಕಾರಿಗಳು) ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಹತ್ವದ ವಿಷಯವನ್ನು ಹಂಚಿಕೊಂಡ ಅನ್ಬುಕುಮಾರ್​, ಮತದಾರರ ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಫಾರಂ ತಲುಪಿಸಬೇಕು ಎಂದು ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಮರುಸೂಚನೆ ನೀಡಿದ್ದಾರೆ. ಸಾರ್ವಜನಿಕರಿಂದ ಬರುವ ಯಾವುದೇ ದೂರುಗಳನ್ನು ಕಡೆಗಣಿಸುವುದಿಲ್ಲ, ಪ್ರತಿ ದೂರುಗಳನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಆನ್‌ಲೈನ್ ಮತ್ತು ಭೌತಿಕ ಅರ್ಜಿ ಸಲ್ಲಿಕೆಯ ಗೊಂದಲಗಳ ಕುರಿತು ಮಾತನಾಡಿದ ಮುಖ್ಯ ಚುನಾವಣಾಧಿಕಾರಿಗಳು, ಮತದಾರರು ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೆ, ಅವರು ಮತ್ತೊಮ್ಮೆ ಭೌತಿಕ ಫಾರಂ ಭರ್ತಿ ಮಾಡಿಕೊಡುವ ಅಗತ್ಯವಿಲ್ಲ. ಅದೇ ರೀತಿ, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದಾರೆ ಎಂಬ ಕಾರಣಕ್ಕೆ ಭರ್ತಿ ಮಾಡಿದ ಭೌತಿಕ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಯಾವುದೇ ಬಿಎಲ್‌ಒ ಹೇಳುವಂತಿಲ್ಲ. ಆದರೆ, ಗೊಂದಲಗಳನ್ನು ತಪ್ಪಿಸಲು ಮತದಾರರು ಎರಡರ ಪೈಕಿ ಸಾಧ್ಯವಾದಷ್ಟು ಯಾವುದಾದರೂ ಒಂದು ವಿಧಾನವನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎಂದು ಸ್ಪಷ್ಟಪಡಿಸಿದರು.

ವೆಬ್‌ಸೈಟ್‌ನಲ್ಲಿ ಬಿಎಲ್‌ಒಗಳ ಮೊಬೈಲ್ ನಂಬರ್‌ಗಳನ್ನು ಪ್ರಕಟಿಸಲಾಗಿದ್ದು, ಅಗತ್ಯ ಇರುವ ಮತದಾರರು ಅವರಿಗೆ ನೇರವಾಗಿ ಕರೆ ಮಾಡಬಹುದು. ಯಾರ ಮನೆಗೆ ಇದುವರೆಗೆ ಫಾರಂ ತಲುಪಿಲ್ಲವೋ, ಅವರ ಮನೆಗೆ ಮುಂದಿನ ದಿನಗಳಲ್ಲಿ ಬರಲಿದ್ದು, ಜುಲೈ 29ರವರೆಗೆ ಇದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ದಾಖಲಿಸಿದ್ದರೆ ಅದನ್ನು ಸರಿಪಡಿಸಲು ಬಿಎಲ್‌ಒಗಳಿಗೆ ಜುಲೈ 29ರ ವರೆಗೆ ಎಡಿಟ್ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಭೌತಿಕ ಅರ್ಜಿಯಲ್ಲಿ ದೋಷಪೂರಿತ ಹೆಸರು, ವಿಳಾಸ ಸರಿಪಡಿಸಿಕೊಳ್ಳಲು 'ಫಾರಂ 8' ಅನ್ನು ಬಳಸಬಹುದಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಸಾರ್ವಜನಿಕರು ಈ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಇನ್ನೂ ಸರ್ಕಾರವು ಅರ್ಜಿದಾರರಿಗೆ ನೀಡಲು ಉದ್ದೇಶಿಸಿರುವ 'ಶಾಶ್ವತ ನಿವಾಸ ಪ್ರಮಾಣ ಪತ್ರ'ವನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸುವ ಕುರಿತು ಆಗಸ್ಟ್ 5ರಂದು ನಡೆಯಲಿರುವ ಅರ್ಜಿ ಪರಿಶೀಲನಾ ಹಂತದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅರ್ಜಿಗಳ ವಿತರಣೆಯನ್ನು ಬಿಎಲ್‌ಒಗಳೇ ನೇರವಾಗಿ ಮಾಡಬೇಕಾಗಿದ್ದರೂ, ಮತದಾರರು ಭರ್ತಿ ಮಾಡಿದ ಅರ್ಜಿಗಳನ್ನು ರಾಜಕೀಯ ಪಕ್ಷಗಳ ಬಿಎಲ್ಎ (ಮತಗಟ್ಟೆ ಮಟ್ಟದ ಏಜೆಂಟರು) ಗಳು ಕೂಡ ಸಂಗ್ರಹಿಸಿ ಬಿಎಲ್‌ಒಗಳಿಗೆ ತಲುಪಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳ ಮೇಲ್ವಿಚಾರಣೆಗಾಗಿ ದೆಹಲಿಯಿಂದ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಆಗಮಿಸಿದ್ದು, ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸುತ್ತಿದೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.

ಸ್ವಂತ ಸುದ್ದಿ ಅಲ್ಲ
ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ