ಅಕ್ರಮ ಬಂಧಿಸಿದ್ದಕ್ಕಾಗಿ ವ್ಯಕ್ತಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್‌ ಆದೇಶ! 4 ವಾರ ಗಡುವು

ಅಕ್ರಮ ಬಂಧಿಸಿದ್ದಕ್ಕಾಗಿ ವ್ಯಕ್ತಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್‌ ಆದೇಶ! 4 ವಾರ ಗಡುವು

ಬೆಂಗಳೂರು: ಕೊಡಗಿನ ಹೋಂಸ್ಟೇನಲ್ಲಿ ಅಮೆರಿಕದ ಪ್ರವಾಸಿ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಸಂಬಂಧ ಹೋಂಸ್ಟೇ ಮಾಲೀಕರನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ಬುಧವಾರ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೋಂಸ್ಟೇ ಮಾಲೀಕ ಪಿ.ಪೊನ್ನಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ , ಈ ಆದೇಶ ಮಾಡಿದೆ. ಆದರೆ, ಈ ಹಂತದಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿರುವ ನ್ಯಾಯಾಲಯ, ತನಿಖೆ ಮುಂದುವರಿಯುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ''ಪ್ರಕರಣ ತನಿಖೆಯ ಹಂತದಲ್ಲಿರುವಾಗ ಹಸ್ತಕ್ಷೇಪದ ಅಗತ್ಯವಿಲ್ಲ. ಹಾಗಾಗಿ, ಅಪರಾಧ ಪ್ರಕರಣವನ್ನು ರದ್ದುಗೊಳಿಸುವ ಮನವಿ ಸ್ವೀಕಾರಾರ್ಹವಾಗಿದೆ. ಅರ್ಜಿದಾರರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಲಾಗುತ್ತಿದೆ. ಅರ್ಜಿದಾರರು ಅಂತಹ ಅಕ್ರಮ ಬಂಧನಕ್ಕೆ ಪರಿಹಾರ ಪಡೆಯಲು ಅರ್ಹರಾಗುತ್ತಾರೆ. ಕ್ರಿಮಿನಲ್‌ ಅರ್ಜಿಯನ್ನು ಭಾಗಶಃ ಅನುಮತಿಸಲಾಗಿದೆ. ಅರ್ಜಿದಾರರು 5 ಲಕ್ಷ ರೂ. ಪರಿಹಾರಕ್ಕೆ ಅರ್ಹರಾಗಿದ್ದಾರೆ. ಆದೇಶದ ಪ್ರತಿ ಸ್ವೀಕರಿಸಿದ 4 ವಾರಗಳಲ್ಲಿ ರಾಜ್ಯ ಸರಕಾರವು ಅರ್ಜಿದಾರರಿಗೆ ಪರಿಹಾರ ಪಾವತಿಸಬೇಕು,'' ಎಂದು ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು, ''ನಮ್ಮ ಕಕ್ಷಿದಾರರು ಯಾವುದೇ ಅತ್ಯಾಚಾರವೆಸಗಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಎಫ್‌ಐಆರ್‌ನಲ್ಲಿಆರೋಪಿಸದಿದ್ದರೂ ನಂತರದ ಹಂತದಲ್ಲಿ'ಸಾಮಾನ್ಯ ಉದ್ದೇಶ' ಎಂಬ ಅಂಶವನ್ನು ಸೇರಿಸಿ ಬಂಧಿಸಲಾಗಿದೆ. ಅಲ್ಲದೆ, ಘಟನೆಯ ಸಮಯದಲ್ಲಿಅವರು ಹೋಂಸ್ಟೇನಲ್ಲಿರಲಿಲ್ಲಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲಾಗುವುದು,'' ಎಂದು ತಿಳಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ, ''ಹೋಂ ಸ್ಟೇ ಮಾಲೀಕರು ಸಂತ್ರಸ್ತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನಗಳ ಕಾಲ ಹೋಂಸ್ಟೇನಲ್ಲಿಉಳಿಯುವಂತೆ ಒತ್ತಾಯಿಸಿದ್ದರು ಮತ್ತು ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ತಡೆ ಹಿಡಿದಿದ್ದರೆಂಬ ಆರೋಪವಿದೆ,'' ಎಂದು ಹೇಳಿದ್ದರು.

ಪ್ರಕರಣದ ಹಿನ್ನೆಲೆ ಏನು?

ಏಪ್ರಿಲ್‌ 12ರಂದು ಹೋಂಸ್ಟೇಗೆ ಆಗಮಿಸಿದ ಸಂತ್ರಸ್ತೆಗೆ ಪಾನೀಯದಲ್ಲಿಅಮಲು ಪದಾರ್ಥ ಬೆರೆಸಿ, ಹೋಂಸ್ಟೇ ನೌಕರ ಅತ್ಯಾಚಾರ ಎಸಗಿದ್ದಾನೆಂಬ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಆನಂತರ ಮಾಲೀಕರ ವಿರುದ್ಧ ಸೆಕ್ಷನ್‌ 64(1) (ಅತ್ಯಾಚಾರ), 351(2) (ಕ್ರಿಮಿನಲ್‌ ಬೆದರಿಕೆ), 238 ಮತ್ತು 239 ಬಿಎನ್‌ಎಸ್‌ (ಅಪರಾಧ ಮಾಡಲು ಯೋಜನೆ ಮರೆಮಾಚುವುದು ಮತ್ತು ಸುಳ್ಳು ಮಾಹಿತಿ ನೀಡುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಏ.19ರಂದು ಮಾಲೀಕರನ್ನು ಬಂಧಿಸಲಾಗಿತ್ತು. ಅದನ್ನು ಪ್ರಶ್ನಿಸಿದ್ದ ಹೋಂಸ್ಟೇ ಮಾಲೀಕರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಮತ್ತು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿ, ಅಕ್ರಮವಾಗಿ ಬಂಧಿಸಿರುವುದಕ್ಕೆ 15 ಲಕ್ಷ ರೂ. ಪರಿಹಾರ ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದರು.

ರಾಜ್ಯಮಟ್ಟದ ಪತ್ರಿಕೆಯಿ‌ಂದ

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ