ಸಾಗರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಸಾಗರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಸಾಗರ ; ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿದ್ದು, ನಗರವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಹಲವು ಮನೆಗಳು ಕುಸಿದು ಬಿದ್ದಿವೆ.
ಪಟ್ಟಣದ ಶಿವಪ್ಪ ನಾಯಕ ನಗರದ 29ನೇ ವಾರ್ಡಿನ ಆಟೊ ಚಾಲಕ ಮಂಜುನಾಥ್ ಎಂಬವರ ಮನೆಗೆ ಸೋಮವಾರ ರಾತ್ರಿ ನೀರು ನುಗ್ಗಿ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ತಡರಾತ್ರಿ ಮನೆ ಬಿದ್ದು ಕುಟುಂಬಸ್ಥರು ಅಪಾಯದಿಂದ ಪಾರಾಗಿ ದ್ದರೂ ರಾತ್ರಿ ನೆಲೆಯಿಲ್ಲದೆ ಕಳೆಯುವ ಸ್ಥಿತಿ ಬಂದಿತ್ತು. ಮನೆಗೆ ಈತನಕ ಹಕ್ಕುಪತ್ರವೂ ಸಿಗದೆ ಇರುವುದರಿಂದ ನಮಗೆ ಸರಕಾರಿ ಸೌಲಭ್ಯ ಯಾವುದೂ ಸಿಗುತ್ತಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕೆಂದು ಮಂಜುನಾಥ್ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಶಾಸಕರ ಮಾರ್ಗದರ್ಶನದಂತೆ ಮಂಗಳವಾರ ಕಾಂಗ್ರೆಸ್ ಪ್ರಮುಖರು ಮನೆ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಆರ್ಥಿಕ ನೆರವು ನೀಡಿದರು.
ವಿಪರೀತ ಮಳೆಯಿಂದಾಗಿ ಚೆನ್ನಮ್ಮ ವೃತ್ತ ಹಾಗೂ ಸಾಗರ ನಗರದಿಂದ ಸೂರನಗದ್ದೆ ಗ್ರಾಮಕ್ಕೆ ಹೋಗುವ ರಸ್ತೆಗಳು ಜಲಾವೃತವಾಗಿದ್ದು, ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಚರಂಡಿ ನಿರ್ಮಿಸಿ, ನೀರು ಹರಿಯಲು ಅವಕಾಶ ಮಾಡಿಕೊಡಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಎಲ್ಲ ಕೆಲಸಗಳನ್ನು ಶಾಸಕರೇ ನೋಡಿ ಸರಿ ಮಾಡಿಸಬೇಕು ಎನ್ನುವ ನಗರಸಭೆ ಅಧಿಕಾರಿಗಳ ಧೋರಣೆ ಬದಲಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಸೂರನಗದ್ದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ವಿಪರೀತ ಮಳೆ ಸುರಿಯುತ್ತಿದ್ದು, ಇನ್ನೊಂದು ಕಡೆ ಸಾಗರ ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಜನರಿಗೆ ಕುಡಿಯುವ ನೀರು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಕ್ಕೆ ಶರಾವತಿ ಹಿನ್ನೀರಿನಿಂದ ನೀರು ಪೂರೈಸುವ ಚೈನಾಗೇಟ್ ಪಕ್ಕದ ಅಂಬುಗಳಲೆ ಪಂಪ್ ಹೌಸ್‌ನಲ್ಲಿ ಉಂಟಾದ ವಿದ್ಯುತ್ ಸಮಸ್ಯೆಯಿಂದಾಗಿ ಮೋಟರ್ ಸುಟ್ಟು ಹೋಗಿದ್ದರಿಂದ ಸಾಗರ ಪಟ್ಟಣಕ್ಕೆ ನೀರಿನ ಸರಬರಾಜು ಆಗುತ್ತಿಲ್ಲ.
*ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಪೌರಾಯುಕ್ತ ಎಚ್. ಕೆ.ನಾಗಪ್ಪ ಹಾಗೂ ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ ರಮೇಶ್*
ಸಾಂದರ್ಭಿಕ ಚಿತ್ರಮೋಟಾರ್ ರಿಪೇರಿ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿ ಸಿಬ್ಬಂದಿ ಜೊತೆ ನಡೆಸಿದ ಕಾರ್ಯಾಚರಣೆಯಿಂದಾಗಿ ವಿದ್ಯುತ್ ಸಮಸ್ಯೆ ಹಾಗೂ ಪಂಪ್‌ಸೆಟ್ ರಿಪೇರಿ ನಡೆದದ್ದು, ನೀರು ಸರಬರಾಜು ತಕ್ಷಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂಬುಗಳಲೆ ಜಲಶುದ್ದೀಕರಣ ಘಟಕದಲ್ಲಿ ಪದೇಪದೇ ಮೋಟಾರ್ ಹಾಳಾಗುವುದು, ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವುದರಿಂದ ಸಾಗರ ಪಟ್ಟಣ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment