ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಮಾಡದೆ ಏಕಾಏಕಿ ರಸ್ತೆ ಸಂಚಾರವನ್ನು ಬಂದ್-ಮಾಜಿ ಜಿಪಂ‌ ಸದಸ್ಯ ರತ್ನಾಕರ ಹೊನಗೋಡು ಅಸಮಾಧಾನ

ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಮಾಡದೆ ಏಕಾಏಕಿ ರಸ್ತೆ ಸಂಚಾರ ಬಂದ್-ಮಾಜಿ ಜಿಪಂ‌ ಸದಸ್ಯ ರತ್ನಾಕರ ಹೊನಗೋಡು ಅಸಮಾಧಾನ


ಸಾಗರ ; ಇಲ್ಲಿನ ಆನಂದಪುರ ಸಮೀಪದ ಯಡೇಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ನಡೆಯುತ್ತಿರುವ ಕಾಮಗಾರಿಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸೂಕ್ತವಾದ ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಮಾಡದೆ ಏಕಾಏಕಿ ರಸ್ತೆ ಸಂಚಾರವನ್ನು ಬಂದ್ ಮಾಡಿರುವುದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ದಿನನಿತ್ಯ ತೀವ್ರ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ವಿರುದ್ಧ ಹರಿಹಾಯ್ದ ಮಾಜಿ ಜಿ.ಪಂ. ಸದಸ್ಯ:

ಸಾಗರ ಕ್ಷೇತ್ರದ ಶಾಸಕರು ಸಚಿವರಾಗುವ ಆಸೆಯ ಬೆನ್ನತ್ತಿ ಹೋಗಿದ್ದಾರೆಯೇ ಹೊರತು, ಕಳೆದ ಎರಡುವರೆ ತಿಂಗಳಿನಿಂದ ಕ್ಷೇತ್ರದ ಜನರ ಸಮಸ್ಯೆಗಳ ಕಡೆ ತಿರುಗಿಯೂ ನೋಡುತ್ತಿಲ್ಲ. ಕೇವಲ ಹಣ ಬಿಡುಗಡೆಯಾಗಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಶಾಸಕರು, ವಾಸ್ತವದಲ್ಲಿ ಜನರ ಸಂಕಷ್ಟವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೇವಲ ಗುದ್ದಲಿ ಪೂಜೆ ಮಾಡಿ ಕೈತೊಳೆದುಕೊಳ್ಳುವುದು ಅವರ ಹವ್ಯಾಸವಾಗಿದೆ ಎಂದು ರತ್ನಾಕರ ಹೊನಗೋಡು ಆರೋಪಿಸಿದರು.

ಅವೈಜ್ಞಾನಿಕ ರಸ್ತೆ ದುರಸ್ತಿ:

ಸಾರ್ವಜನಿಕರ ಓಡಾಟಕ್ಕೆ ಪರ್ಯಾಯ ಮಾರ್ಗವಾಗಿ ನೀಡಲಾಗಿರುವ ರೊಟ್ಟಿ ಫ್ಯಾಕ್ಟರಿ ರಸ್ತೆಯು ಅತ್ಯಂತ ಅಧ್ವಾನವಾಗಿದೆ. ಅಧಿಕಾರಿಗಳು ಕೇವಲ ಒಂದೆರಡು ಲಾರಿ ತುಂಡುಗಲ್ಲುಗಳನ್ನು ಹಾಕಿ ಕಾಟಾಚಾರಕ್ಕೆ ರಸ್ತೆ ದುರಸ್ತಿ ಮಾಡಿದ್ದಾರೆ. ಇದರಿಂದಾಗಿ ವಾಹನಗಳು ಸಂಚರಿಸಲು ಸಾಧ್ಯವಾಗದೆ ಸವಾರರು ಪರದಾಡುವಂತಾಗಿದೆ. ಕನಿಷ್ಠ ೩ ರಿಂದ ೪ ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾವೆಲ್ ಹಾಕಿ ರಸ್ತೆ ಸರಿಪಡಿಸಬಹುದಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಮೊದಲೇ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಆದರೆ ಸ್ಥಳೀಯ ಮುಖಂಡರ ಭರವಸೆ ನಂಬಿ ಸುಮ್ಮನಾಗಿದ್ದ ನಮಗೆ ಈಗ ಮೋಸವಾಗಿದೆ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕನಿಷ್ಠ ₹3 ರಿಂದ ₹4 ಲಕ್ಷ ವೆಚ್ಚದಲ್ಲಿ ರಸ್ತೆಗೆ ಗ್ರಾವೆಲ್ ಹಾಕಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬಹುದಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳಾದ ಎಸಿ ಹಾಗೂ ತಹಶೀಲ್ದಾರ್ ಅವರಿಗೆ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಸಾರ್ವಜನಿಕರ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ರಸ್ತೆಯನ್ನು ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ಸ್ವಂತ ವೆಚ್ಚದಲ್ಲಿ ರಸ್ತೆ ಸರಿಪಡಿಸುತ್ತೇವೆ. ಆಡಳಿತದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಾಳೆ ಬೆಳಿಗ್ಗೆ ಜಿಲ್ಲಾಧಿಕಾರಿ (DC) ಹಾಗೂ ಉಪವಿಭಾಗಾಧಿಕಾರಿ (AC) ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರತ್ನಾಕರ ಹೊನಗೋಡು ಎಚ್ಚರಿಸಿದರು.

ಸ್ಥಳೀಯ ಮುಖಂಡ ದೇವರಾಜ ಮಾತನಾಡಿ, “ಕಾಂಗ್ರೆಸ್‌ನ ಸ್ಥಳೀಯ ನಾಯಕರು ಶಾಸಕರೊಂದಿಗೆ ಮಾತನಾಡಿ, ನಾಳೆಯಿಂದಲೇ ₹10 ಲಕ್ಷ ಅನುದಾನದಲ್ಲಿ ಪರ್ಯಾಯ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಂದು ರಸ್ತೆಯ ದುಸ್ಥಿತಿ ಮುಂದುವರಿದಿದ್ದರೂ, ಆ ಮಾತು ಹೇಳಿದ ನಾಯಕರು ಹಾಗೂ ಬೆಂಬಲಿಗರು ಯಾರೂ ಸ್ಥಳದಲ್ಲಿ ಕಾಣಿಸುತ್ತಿಲ್ಲ. ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರೂ ಅವರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ,” ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಗೇರುಬೀಸು, ನಾರಿ ಲೋಕಪ್ಪ, ಗಣಪತಿ, ಆನಂದ, ರವಿ ಶೆಟ್ಟಿ ಇನ್ನಿತರರು ಇದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ