ತೀರ್ಥಹಳ್ಳಿ– ರಿಪ್ಪನ್ ಪೇಟೆ - ಸಾಗರ ಮಾರ್ಗಕ್ಕೆ ಎರಡು ಕೆಎಸ್‌ಆರ್‌ಟಿಸಿ ಬಸ್ ಸೇವೆ
ತೀರ್ಥಹಳ್ಳಿ– ರಿಪ್ಪನ್ ಪೇಟೆ - ಸಾಗರ ಮಾರ್ಗಕ್ಕೆ ಎರಡು ಕೆಎಸ್‌ಆರ್‌ಟಿಸಿ ಬಸ್ ಸೇವೆ
ಉದ್ಘಾಟನೆ ವೇಳೆ ಖಾಸಗಿ ಬಸ್ ಏಜೆಂಟರ ಆಕ್ಷೇಪ, ಪೊಲೀಸ್ ಮಧ್ಯಸ್ಥಿಕೆಯಿಂದ ವಿವಾದಕ್ಕೆ ತೆರೆ
ರಿಪ್ಪನ್ ಪೇಟೆ : ಬಹುಕಾಲದ ಸಾರ್ವಜನಿಕರ ಬೇಡಿಕೆಯಾಗಿದ್ದ ರಿಪ್ಪನ್‌ಪೇಟೆ–ತೀರ್ಥಹಳ್ಳಿ–ಸಾಗರ ಮಾರ್ಗಕ್ಕೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಗುರುವಾರ ಚಾಲನೆ ನೀಡಲಾಯಿತು. ಹೊಸನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಬಸ್ ಸೇವೆ ಆರಂಭವಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಲ ಖಾಸಗಿ ಬಸ್ ಏಜೆಂಟರು ಹಾಗೂ ಮಾಲೀಕರು, ಕೆಎಸ್‌ಆರ್‌ಟಿಸಿ ಬಸ್‌ಗಳ ಪರ್ಮಿಟ್ ಮತ್ತು ಸಂಚಾರ ಸಮಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಖಾಸಗಿ ಬಸ್ ಏಜೆಂಟರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರಂ ಸೇರಿದಂತೆ ಹಲವು ಮುಖಂಡರು ಪರಿಸ್ಥಿತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಖಾಸಗಿ ಬಸ್ ಪ್ರತಿನಿಧಿಗಳು ತಮ್ಮ ವಾದವನ್ನು ಮುಂದುವರಿಸಿದರು.
ವಿಷಯದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಎರಡೂ ಪಕ್ಷದ ಪ್ರತಿನಿಧಿಗಳನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದರು. ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ನಡೆದುಕೊಳ್ಳುವಂತೆ ಖಾಸಗಿ ಬಸ್ ಏಜೆಂಟರು ಹಾಗೂ ಮಾಲೀಕರಿಗೆ ಬುದ್ಧಿವಾದ ಹೇಳಿದ ನಂತರ ವಿವಾದಕ್ಕೆ ತೆರೆ ಬಿದ್ದಿತು.
ಇನ್ನು, ಹೊಸನಗರ ತಾಲೂಕಿನ ಜನರ ಬಹುಕಾಲದ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದೇ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ ಆರಂಭಿಸಲು ಖಾಸಗಿ ಬಸ್ ಮಾಫಿಯಾ ಅಡ್ಡಿಯಾಗುತ್ತಿದೆ ಎಂಬ ಕುರಿತು ವರದಿಗಳಾಗಿದ್ದವು.
ಇದೀಗ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಆರಂಭಗೊಂಡಿರುವುದು ಸಾರ್ವಜನಿಕರ ಹೋರಾಟಕ್ಕೆ ದೊರೆತ ಫಲಶ್ರುತಿ ಎನ್ನಬಹುದು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment