ಎಲ್ ನಿನೋ ಬಿಸಿಲಿನ ಬೆನ್ನಲ್ಲೇ ಮಲೆನಾಡಿನಲ್ಲಿ ದಿಢೀರ್ ಮಳೆ

ಎಲ್ ನಿನೋ ಬಿಸಿಲಿನ ಬೆನ್ನಲ್ಲೇ ಮಲೆನಾಡಿನಲ್ಲಿ ದಿಢೀರ್ ಮಳೆ

ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಪುನಃ ಆರಂಭವಾಗಿದೆ. ಕರಾವಳಿ ಜಿಲ್ಲೆಯ ಗಟ್ಟದ ಮೇಲಿನ ಭಾಗಗಳಲ್ಲಿ ದಿನಕ್ಕೆ ಎರಡು ಮೂರು ದೊಡ್ಡ ನೆಗಸು ಸುರಿಯತೊಡಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ.

ಎಲ್ ನಿನೋ ಪರಿಣಾಮವಾಗಿ ಮಳೆ ಕೊರತೆ ನಿಶ್ಚಿತ ಎಂಬ ಹೆದರಿಕೆ ಇದ್ದಾಗಲೂ ಅನೇಕ ಹವಾಮಾನ ಸೈಟುಗಳು ಮುನ್ಸೂಚನೆ ನೀಡಿದಂತೆ ಮಳೆ ಆರಂಭವಾಗಿದ್ದು ಸಮಾಧಾನದ ಸಂಗತಿ.

ಆದರೆ ಇದಕ್ಕೆ ಕಾರಣ ಏನು ಎಂಬ ಕುತೂಹಲದಿಂದ ತಡಕಾಡಿದಾಗ ಸಿಕ್ಕ ಮಾಹಿತಿ ಹಂಚಿಕೊಳ್ಳುವೆ.

ಸುಮಾರು ಒಂದು ವಾರದ ಕಾಲ ಬಿದ್ದ ಕಡು ಬಿಸಿಲು ಮಲೆನಾಡಿನ ಭೂಭಾಗವನ್ನು ತೀವ್ರವಾಗಿ ಕಾಯಿಸಿತ್ತು. ಇದರಿಂದಾಗಿ ಭೂಮಿಯ ಮೇಲ್ಮೈಯಲ್ಲಿ ವಾತಾವರಣವು ಹಗುರವಾಗಿ ಮೇಲೇರಲು ಆರಂಭಿಸಿತು. ಇದೇ ಸಮಯದಲ್ಲಿ, ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ 'ಆಫ್-ಶೋರ್ ಟ್ರಫ್' (ಕರಾವಳಿಗೆ ಸಮಾನಾಂತರವಾಗಿರುವ ಕಡಿಮೆ ಒತ್ತಡದ ಮುಂಚಾಚು ರೇಖೆ) ತೇವಾಂಶ ಭರಿತ ಮಾರುತಗಳನ್ನು ಭೂಮಿಯ ಕಡೆಗೆ ತಳ್ಳಿತು. ಕಾದಿದ್ದ ಭೂಮಿಯ ಶಾಖ ಮತ್ತು ಸಮುದ್ರದ ತೇವಾಂಶ ಒಟ್ಟಿಗೆ ಸೇರಿದಾಗ ವಾತಾವರಣದಲ್ಲಿ ತೀವ್ರ ಅಸ್ಥಿರತೆ ಉಂಟಾಗಿ, ಯಾವುದೇ ದೊಡ್ಡ ವಾಯುಭಾರ ಕುಸಿತ ಅಥವಾ ಚಂಡಮಾರುತದ ಪರಿಣಾಮ ಇಲ್ಲದೆಯೂ ಮುಂಗಾರು ಮರುಜೀವ ಪಡೆದು ಮಳೆ ಸುರಿಯಲು ಹಾದಿ ಮಾಡಿಕೊಟ್ಟಿತು.

ಸದ್ಯ ಮಲೆನಾಡಿನಲ್ಲಿ ಕಂಡುಬರುತ್ತಿರುವ ಮಳೆಯ ಮಾದರಿ ವಿಶಿಷ್ಟವಾಗಿದೆ. ದಿನಕ್ಕೆ ಎರಡು-ಮೂರು ಬಾರಿ ಕೇವಲ ಐದರಿಂದ ಹತ್ತು ನಿಮಿಷಗಳ ಕಾಲ ಭಾರಿ ಮಳೆ ಸುರಿದು, ನಂತರ ಒಂದೆರಡು ಗಂಟೆಗಳ ಕಾಲ ಬಿಡುವು ಸಿಗುತ್ತಿದೆ. ಇದಕ್ಕೆ ಪ್ರಮುಖ ಕಾರಣ 'ಕನ್ವೆಕ್ಟಿವ್ ಕ್ಲೌಡ್ಸ್' (Convective Clouds) ಅಥವಾ ಹಠಾತ್ ಸೃಷ್ಟಿಯಾಗುವ ತೇವಾಂಶಭರಿತ ದಟ್ಟ ಮೋಡಗಳ ಗುಂಪುಗಳು. ಸ್ಥಳೀಯ ಉಷ್ಣಾಂಶದಿಂದ ಸೃಷ್ಟಿಯಾಗುವ ಈ ಮೋಡಗಳು ಗಾಳಿಯ ವೇಗ ಕಡಿಮೆಯಿರುವುದರಿಂದ ಒಂದೇ ಕಡೆ ನಿಲ್ಲದೆ ನಿಧಾನವಾಗಿ ಚಲಿಸುತ್ತವೆ. ಅವುಗಳು ನಮ್ಮ ಪ್ರದೇಶದ ಮೇಲೆ ಹಾದುಹೋಗುವಾಗ ತಕ್ಷಣವೇ ಭಾರಿ ಮಳೆ ಸುರಿಸಿ ಖಾಲಿಯಾಗುತ್ತವೆ. ಆ ಮೋಡಗಳು ಕರಗಿದಾಗ ಬಿಡುವು ಸಿಗುತ್ತದೆ, ತೇವಾಂಶದ ಪೂರೈಕೆ ನಿರಂತರವಾಗಿರುವುದರಿಂದ ಒಂದಷ್ಟು ಸಮಯದ ನಂತರ ಮತ್ತೆ ಸಣ್ಣದಾಗಿ ಮಳೆ ಆರಂಭವಾಗುತ್ತದೆ. ಇದರ ವಿಶೇಷತೆ ಎಂದರೆ ಒಂದೆರಡು ಕಿಲೋ ಮೀಟರ್ ಆಚೆ ಮಳೆ ಸುರಿಯುತ್ತದೆ ಎಂದು ಹೇಳಲು ಬಾರದು.

ಗಾಳಿಯ ವೇಗ ತೀರಾ ಕಡಿಮೆಯಿರುವುದರಿಂದ ಈ ತೇವಾಂಶಭರಿತ ಮೋಡಗಳು ಪಶ್ಚಿಮ ಘಟ್ಟಗಳ ನೈಸರ್ಗಿಕ ತಡೆಗೋಡೆಯನ್ನು ದಾಟಿ ಬಯಲುಸೀಮೆಯತ್ತ ಚಲಿಸಲು ಸಾಧ್ಯವಾಗುತ್ತಿಲ್ಲ. ಪರ್ವತಗಳನ್ನೇರುವ ಪ್ರಕ್ರಿಯೆಯಲ್ಲಿ ಮೋಡಗಳು ತಣ್ಣಗಾಗಿ, ತೇವಾಂಶವನ್ನು ಘಟ್ಟ ಪ್ರದೇಶಗಳಲ್ಲೇ ಸುರಿದು ಹಗುರಾಗುತ್ತಿವೆ. ಇದರಿಂದಾಗಿ ಬಯಲುಸೀಮೆಯತ್ತ (ಹಾವೇರಿ, ಧಾರವಾಡ ಅಥವಾ ಗದಗ ಭಾಗಕ್ಕೆ) ಸಾಗುವಾಗ ಇವುಗಳಲ್ಲಿ ತೇವಾಂಶವೇ ಇರುವುದಿಲ್ಲ. ಈ ಪ್ರಕ್ರಿಯೆಯನ್ನು ಹವಾಮಾನದಲ್ಲಿ 'ಮಳೆ ನೆರಳಿನ ಪ್ರದೇಶ' ಎನ್ನಲಾಗುತ್ತದೆ. ವಾತಾವರಣದಲ್ಲಿ ಗಾಳಿಯ ವೇಗ ಚುರುಕಾಗುವವರೆಗೂ ಈ ಮಳೆಯು ಮಲೆನಾಡಿನ ಗಡಿಯಲ್ಲೇ ಲಾಕ್ ಆಗಿರುತ್ತದೆ.

ಆರಂಭದಲ್ಲಿ ಕಂಡುಬಂದ ಸೆಖೆ ಈಗ ಕಡಿಮೆಯಾಗಿರುವುದು ವಾತಾವರಣವು ಸ್ಥಿರಗೊಳ್ಳುತ್ತಿರುವುದರ ಸಂಕೇತವಾಗಿದೆ. ಭಾರಿ ಮಳೆಯು ಭೂಮಿಯ ಶಾಖವನ್ನು ತಗ್ಗಿಸಿದೆ. ಈಗ ಆಕಾಶದಲ್ಲಿ ದಟ್ಟವಾದ 'ಸ್ಟ್ರಾಟಸ್' ಮಾದರಿಯ ಮೋಡಗಳು ಆವರಿಸಿರುವುದರಿಂದ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುತ್ತಿಲ್ಲ. ಇದು ಮಲೆನಾಡಿನ ಸಾಂಪ್ರದಾಯಿಕ ಜಡಿಮಳೆಯ ಮುನ್ಸೂಚನೆಯಾಗಿದೆ.

ಕೃಷಿಯ ದೃಷ್ಟಿಯಿಂದ, ಬಿಡುವು ನೀಡುತ್ತಾ ಸುರಿಯುವ ಈ ಮಳೆಯು ಮಣ್ಣಿನಲ್ಲಿ ನೀರು ಇಂಗಲು ಸಹಾಯ ಮಾಡಿ ಅಂತರ್ಜಲ ವೃದ್ಧಿಗೆ ಪೂರಕವಾಗಿದೆ. ಆದರೆ ವಾತಾವರಣದಲ್ಲಿ ಆರ್ದ್ರತೆ (Humidity) ಹೆಚ್ಚಿರುವುದರಿಂದ ಅಡಿಕೆ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಕೊಳೆ ರೋಗದಂತಹ ಶಿಲೀಂಧ್ರ ಬಾಧೆಗಳು ಬಾರದಂತೆ ತೋಟಗಳಲ್ಲಿ ಸೂಕ್ತ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅದೇ ರೀತಿ ಮುಂಜಾಗ್ರತಾ ಕ್ರಮವಾಗಿ ಶಿಲೀಂಧ್ರ ನಾಶಕ ಸಹ ಸಿಂಪಡಿಸುವುದು ಒಳ್ಳೆಯದು.

ಮುಂದಿನ ದಿನಗಳಲ್ಲಿ ಈ ವಾತಾವರಣವು ನಿರಂತರ ಜಡಿಮಳೆಯಾಗಿ ಪರಿವರ್ತನೆಗೊಳ್ಳುವುದೆ ಎಂಬ ಕುತೂಹಲ ಮಾತ್ರ ಹಾಗೇ ಉಳಿದಿದೆ.ಗ

ದ್ದೆ ಬಯಲು ನಾಟಿಗೆ ಸಿದ್ಧವಾಗುತ್ತಿದ್ದು ಭತ್ತದ ಬೆಳೆಗೆ ಸಾಕಾಗುವಷ್ಟು ಮಳೆ ಬರಲಿ ಎಂದು ಹಾರೈಸುತ್ತ ರೈತ ಮುಗಿಲು ನೋಡುತ್ತಿದ್ದಾನೆ.ಈ

ಮಳೆ ಬಯಲು ಸೀಮೆಗೂ ದಾಟಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೆ!?

ಸಾಮಾಜಿಕ ಜಾಲತಾಣದ್ದು,

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ