ಕರ್ನಾಟಕದಲ್ಲಿ‌ ಮಳೆ‌ ಕೊರತೆ ; ಪಿಎಂಗೆ ಪತ್ರ‌ಬರೆದ ಸಿಎಂ

ಕರ್ನಾಟಕದಲ್ಲಿ‌ ಮಳೆ‌ ಕೊರತೆ ; ಪಿಎಂಗೆ ಪತ್ರ‌ಬರೆದ ಸಿಎಂ

ಕರ್ನಾಟಕದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ತೀವ್ರ ಕೈಕೊಟ್ಟಿದ್ದು, ರಾಜ್ಯವು ಭೀಕರ ಬರಗಾಲದ ಭೀತಿಯನ್ನು ಎದುರಿಸುತ್ತಿದೆ. ಈ ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಅಧಿಕೃತ ಪತ್ರವೊಂದನ್ನು ಬರೆದಿದ್ದಾರೆ. ರಾಜ್ಯದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿರುವ ಸಿಎಂ, ಪರಿಸ್ಥಿತಿಯ ಅಧ್ಯಯನಕ್ಕಾಗಿ ತಕ್ಷಣವೇ ಕೇಂದ್ರ ತಜ್ಞರ ತಂಡವನ್ನು ಕರ್ನಾಟಕಕ್ಕೆ ನಿಯೋಜಿಸುವಂತೆ ತುರ್ತು ವಿನಂತಿ ಮಾಡಿದ್ದಾರೆ. 

ಶೇ. 30 ರಷ್ಟು ಮಳೆ ಕೊರತೆ; ತೀವ್ರ ಹಿನ್ನಡೆ

ಭಾರತೀಯ ಹವಾಮಾನ ಇಲಾಖೆಯ ದೀರ್ಘಾವಧಿ ಮುನ್ಸೂಚನೆಯಂತೆಯೇ 'ಎಲ್ ನಿನೊ'  ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂಗಾರು ಮಾರುತಗಳ ಚಲನೆ ಅತ್ಯಂತ ಮಂದಗತಿಯಲ್ಲಿ ಸಾಗಿದೆ. ಜೂನ್ 5 ರಂದು ರಾಜ್ಯವನ್ನು ಪ್ರವೇಶಿಸಿದ ಮುಂಗಾರು, ಇಡೀ ರಾಜ್ಯವನ್ನು ಆವರಿಸಲು ಬರೋಬ್ಬರಿ 17 ದಿನಗಳನ್ನು ತೆಗೆದುಕೊಂಡಿದ್ದು, ಜೂನ್ 22 ರ ವೇಳೆಗೆ ಪೂರ್ಣವಾಗಿ ವ್ಯಾಪಿಸಿತು. ಜುಲೈ 11, 2026 ರವರೆಗಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ವಾಡಿಕೆಯಾಗಿ 292 ಮಿ.ಮೀ ಮಳೆಯಾಗಬೇಕಿತ್ತು, ಆದರೆ ಕೇವಲ 203 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ಶೇ. 30 ರಷ್ಟು ಮಳೆ ಕೊರತೆ ದಾಖಲಾಗಿದೆ.ವ್ಯಾಪಕ ಬರಗಾಲದ ಮುನ್ಸೂಚನೆ: 141 ತಾಲೂಕುಗಳು ಭೀಕರ ಸ್ಥಿತಿಯಲ್ಲಿ

ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಈಗಾಗಲೇ ಮಳೆ ಕೊರತೆಯಿಂದ ತತ್ತರಿಸಿವೆ. ತಾಲೂಕು ಮಟ್ಟದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಒಟ್ಟು 240 ತಾಲೂಕುಗಳ ಪೈಕಿ 141 ತಾಲೂಕುಗಳು ಅತ್ಯಂತ ಕಡಿಮೆ ಮತ್ತು ತೀವ್ರ ಮಳೆ ಕೊರತೆಯ  ಪಟ್ಟಿಗೆ ಸೇರಿವೆ. ಇದು ಇಡೀ ರಾಜ್ಯಾದ್ಯಂತ ಬರಗಾಲದ ಆವೃತ್ತಿ ವ್ಯಾಪಿಸಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ನದಿಗಳ ಉಗಮ ಸ್ಥಾನದಲ್ಲೇ ಮಳೆ ಇಲ್ಲ

ರಾಜ್ಯದ ಪ್ರಮುಖ ನಾಲ್ಕು ಹವಾಮಾನ ವಲಯಗಳ ಪೈಕಿ, ಕಾವೇರಿ, ತುಂಗಾ ಮತ್ತು ಭದ್ರಾ ನದಿಗಳ ಮುಖ್ಯ ಜಲಾನಯನ ಪ್ರದೇಶವಾಗಿರುವ 'ಮಲೆನಾಡು ಭಾಗ'ದಲ್ಲೇ ದೇಶದಲ್ಲೇ ಗರಿಷ್ಠ ಅಂದರೆ ಶೇ. 34 ರಷ್ಟು ಮಳೆ ಕೊರತೆಯಾಗಿದೆ. ಇದರ ನಂತರ ಕರಾವಳಿ ಭಾಗದಲ್ಲಿ ಶೇ. 30, ಉತ್ತರ ಒಳನಾಡಿನಲ್ಲಿ ಶೇ. 24 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ. 18 ರಷ್ಟು ಮಳೆ ಕೊರತೆ ಉಂಟಾಗಿದೆ.

ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ; ಕೇವಲ ಶೇ. 34 ರಷ್ಟು ಬಿತ್ತನೆ

ಮುಂಗಾರು ಹಂಗಾಮಿನ ಅತ್ಯಂತ ಪ್ರಮುಖ ತಿಂಗಳಾದ ಜುಲೈನಲ್ಲೂ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಅನಿಶ್ಚಿತತೆಯಿಂದಾಗಿ ರೈತರು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಒಟ್ಟು 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಖಾರಿಫ್ ಬಿತ್ತನೆಯ ಗುರಿ ಹೊಂದಲಾಗಿತ್ತು, ಆದರೆ ಜುಲೈ ಮೊದಲ ವಾರದ ಅಂತ್ಯಕ್ಕೆ ಕೇವಲ 28.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ.

ಜಲಾಶಯಗಳಲ್ಲಿ ಕೇವಲ ಶೇ. 34 ರಷ್ಟು ಮಾತ್ರ ನೀರು ಸಂಗ್ರಹ!

ರಾಜ್ಯದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಆಧಾರವಾಗಿರುವ ಜಲಾಶಯಗಳ ಸ್ಥಿತಿಯೂ ಆತಂಕಕಾರಿಯಾಗಿದೆ. ಜುಲೈ 10, 2026 ರ ವೇಳೆಗೆ ರಾಜ್ಯದ ಪ್ರಮುಖ 14 ಬೃಹತ್ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 895.65 ಟಿಎಂಸಿ ಆಗಿದ್ದು, ಪ್ರಸ್ತುತ ಕೇವಲ 303 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದು ಒಟ್ಟು ಸಾಮರ್ಥ್ಯದ ಕೇವಲ ಶೇ. 34 ರಷ್ಟಾಗಿದೆ.

ದೇಶದ ಮೇಲಾಗುವ ಪರಿಣಾಮ ಮತ್ತು ಬೆಲೆ ಏರಿಕೆ ಭೀತಿ

ಕರ್ನಾಟಕವು ಭಾರತದಲ್ಲೇ ಅತಿ ಹೆಚ್ಚು ಬೇಳೆಕಾಳುಗಳು ಹಾಗೂ ಪ್ರಮುಖವಾಗಿ ತೊಗರಿ ಬೇಳೆ ಬೆಳೆಯುವ ಬೃಹತ್ ರಾಜ್ಯವಾಗಿದೆ. ಇಲ್ಲಿ ಉಂಟಾಗಿರುವ ಭೀಕರ ಬರಗಾಲದ ಪರಿಸ್ಥಿತಿಯು ದೇಶೀಯ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇಡೀ ದೇಶದಲ್ಲಿ ತೊಗರಿ ಬೇಳೆ ದರ ಗಗನಕ್ಕೇರುವ ಸಾಧ್ಯತೆಯಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು:

ಈ ಉದ್ಭವಿಸಿರುವ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಕರ್ನಾಟಕ ಸರ್ಕಾರ ಈಗಾಗಲೇ ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ:

ಕೃಷಿ ತಜ್ಞರ ಸಲಹೆಯ ಮೇರೆಗೆ ಜಿಲ್ಲಾವಾರು ಪರ್ಯಾಯ ಬೆಳೆ ಯೋಜನೆ ಹಾಗೂ ಕೃಷಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ನೀರಿನ ಅಭಾವ ತೀವ್ರವಾಗಿರುವುದರಿಂದ, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ 'ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ' ಕಾಯ್ದಿರಿಸಲು ಸರ್ಕಾರ ನೀತಿ ನಿಯಮ ರೂಪಿಸಿದೆ.

ಕೇಂದ್ರದ ನೆರವಿಗಾಗಿ ಸಿಎಂ ಮನವಿ:

ರಾಜ್ಯದ ರೈತರಲ್ಲಿ ಧೈರ್ಯ ತುಂಬಲು ಮತ್ತು ವಾಸ್ತವ ಸ್ಥಿತಿಯನ್ನು ನಿಖರವಾಗಿ ಅಳೆಯಲು ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಕೇಂದ್ರದ ಪರಿಶೀಲನಾ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿಕೊಡಬೇಕು. ಕೇಂದ್ರ ಸರ್ಕಾರದ ಸಕಾಲಿಕ ಧನಸಹಾಯ ಮತ್ತು ಬೆಂಬಲವು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಬರ ಪರಿಹಾರ  ನಿಧಿಗೆ ಇದರಿಂದ ಅನಿಕೂಲವಾಗಲಿದೆ.


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ