ಯಡೇಹಳ್ಳಿ ರೈಲ್ವೆ ಗೇಟ್ ಬಳಿ ಡ್ರೈನೇಜ್ ಕಾಮಗಾರಿ; ಗೊಂದಲದಲ್ಲಿರುವ ವಾಹನ ಸವಾರರು – ಪರ್ಯಾಯ ಮಾರ್ಗ ಬಳಸುವಂತೆ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಮಾಧ್ಯಮದ ಮೂಲಕ ಸಾರ್ವಜನಿಕ ಮಾಹಿತಿ

ಯಡೇಹಳ್ಳಿ ರೈಲ್ವೆ ಗೇಟ್ ಬಳಿ ಡ್ರೈನೇಜ್ ಕಾಮಗಾರಿ; ಗೊಂದಲದಲ್ಲಿರುವ ವಾಹನ ಸವಾರರು – ಪರ್ಯಾಯ ಮಾರ್ಗ ಬಳಸುವಂತೆ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಮಾಧ್ಯಮದ ಮೂಲಕ ಸಾರ್ವಜನಿಕ ಮಾಹಿತಿ

ಸಾಗರ : ಆನಂದಪುರ ಸಮೀಪದ ಯಡೇಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರೈಲು ಹಳಿಯ ಡ್ರೈನೇಜ್ ದುರಸ್ತಿ ಕಾಮಗಾರಿ ನಿನ್ನೆಯಿಂದ (ಸೋಮವಾರ) ಆರಂಭಗೊಂಡಿದ್ದು, ಆಗಸ್ಟ್ 5ರ ರಾತ್ರಿ 12.59 ಗಂಟೆಯವರೆಗೆ ರೈಲ್ವೆ ಗೇಟ್ ಮೂಲಕ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಕಾಮಗಾರಿ ಆರಂಭವಾದ ಮೊದಲ ದಿನವೇ ಹಲವು ವಾಹನ ಸವಾರರು ರೈಲ್ವೆ ಗೇಟ್ ಬಳಿಗೆ ಬಂದು ವಾಪಸ್ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರ್ಯಾಯ ಮಾರ್ಗಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಕೆಲಕಾಲ ಗೊಂದಲ ಉಂಟಾಯಿತು. ಆದರೆ ಸಾಗರ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿದಿದ್ದು, ಆನಂದಪುರ–ಬಟ್ಟೆಮಲ್ಲಪ್ಪ ,ಹೊಸನಗರ ಸಂಪರ್ಕಿಸುವ ಯಡೇಹಳ್ಳಿ ರೈಲ್ವೆ ಗೇಟ್ ಮಾರ್ಗದಲ್ಲಿ ಮಾತ್ರ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ಸಂಚಾರ ವ್ಯವಸ್ಥೆ:

ಕಾಮಗಾರಿ ಹಿನ್ನೆಲೆಯಲ್ಲಿ ಹೆವಿ ವಾಹನಗಳಿಗೆ ಪ್ರತ್ಯೇಕ ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಹೊಸನಗರ ಕಡೆಗೆ ತೆರಳುವ ಲಾರಿ, ಬಸ್ ಹಾಗೂ ಇತರೆ ಲೋಡ್ ವಾಹನಗಳು ಯಡೆಹಳ್ಳಿ ಸರ್ಕಲ್ – ರಿಪ್ಪನ್‌ಪೇಟೆ – ಹೊಸನಗರ ಮಾರ್ಗದಲ್ಲಿ ಸಂಚರಿಸಬೇಕು. ಇದರಿಂದ ಸುಮಾರು 10 ಕಿ.ಮೀ. ಹೆಚ್ಚುವರಿ ದೂರ ಕ್ರಮಿಸಬೇಕಾಗುತ್ತದೆ.

ಬಟ್ಟೆಮಲ್ಲಪ್ಪ ಕಡೆಗೆ ತೆರಳುವ ಹೆವಿ ವಾಹನಗಳು ರಿಪ್ಪನ್ ಪೇಟೆಯ ಬಾಳೂರು ಸರ್ಕಲ್ ಮಾರ್ಗವನ್ನು ಬಳಸಬೇಕಿದ್ದು, ಇದರಿಂದ ಸುಮಾರು 6 ಕಿ.ಮೀ. ಹೆಚ್ಚುವರಿ ದೂರ ಕ್ರಮಿಸಬೇಕಾಗುತ್ತದೆ.

ಇನ್ನು ದ್ವಿಚಕ್ರ ಹಾಗೂ ಲಘು ವಾಹನಗಳು ಯೂನಿವರ್ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಲು ಕೊರ್ಲಿಕೊಪ್ಪ – ಗೇರುಬೀಸು ಮಾರ್ಗವನ್ನು ಬಳಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಸಾಗರ ಉಪವಿಭಾಗಾಧಿಕಾರಿ ವಿರೇಅಸ್ ಕುಮಾರ್  ಸಾರ್ವಜನಿಕರಿಗೆ ಮಾಧ್ಯಮದ ಮೂಲಕ‌ ಮಾಹಿತಿ ನೀಡಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನ ಸವಾರರು ನಿಗದಿಪಡಿಸಿರುವ ಪರ್ಯಾಯ ಮಾರ್ಗಗಳನ್ನೇ ಬಳಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸದೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ