ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಗಾಂಜಾ ಸಾಗಾಟ: ಶಿವಮೊಗ್ಗದಲ್ಲಿ ಕಿಲಾಡಿ ಅರೆಸ್ಟ್, ಲಕ್ಷಾಂತರ ಮೌಲ್ಯದ ಮಾಲು ಜಪ್ತಿ
ಬಿಎಂಡಬ್ಲ್ಯು ಕಾರಿನಲ್ಲಿ ಗಾಂಜಾ ಸಾಗಾಟ: ಶಿವಮೊಗ್ಗದಲ್ಲಿ ಮೌಲ್ಯದ ಮಾಲು ಜಪ್ತಿ
ಶಿವಮೊಗ್ಗ: ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಯಾರಿಗೂ ಸಂಶಯ ಬಾರದಂತೆ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ವಿನೋಬನಗರ ಠಾಣೆಯ ಪೊಲೀಸರು ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಜುಲೈ 6 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಿನಕೊಪ್ಪ ಮಾರ್ಗವಾಗಿ ಕಾರಿನಲ್ಲಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ವಿನೋಬನಗರ ಪಿಎಸ್‌ಐ ಹಾಗೂ ಸಿಬ್ಬಂದಿಗಳ ತಂಡವು ಜಂಟಿ ದಾಳಿ ನಡೆಸಿ, 46 ವರ್ಷದ ಮೌಲಾಸಾಬಾ ಕರ್ಜಗಿ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯಿಂದ ಪೊಲೀಸರು ಭಾರಿ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಂದಾಜು 1,10,000/- ರೂಪಾಯಿ ಮೌಲ್ಯದ ಒಟ್ಟು 02 ಕೆಜಿ 65 ಗ್ರಾಂ ತೂಕದ ಗಾಂಜಾ ಪೊಲೀಸರ ಪಾಲಾಗಿದೆ. ಇದರೊಂದಿಗೆ ಗಾಂಜಾ ಸಾಗಾಟದ ಅಕ್ರಮ ದಂಧೆಗೆ ಬಳಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯು ಕಾರು ಹಾಗೂ ಒಂದು ಮೊಬೈಲ್ ಫೋನ್ ಅನ್ನು ಸಹ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದುಬಾರಿ ಕಾರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಯ ಐಡಿಯಾ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಸದ್ಯ ಈ ಕರಾಳ ದಂಧೆಯ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿ ಮೌಲಾಸಾಬಾ ಈ ಗಾಂಜಾವನ್ನು ಎಲ್ಲಿಂದ ತರುತ್ತಿದ್ದ? ಯಾರಿಗೆ ತಲುಪಿಸಲು ಸ್ಕೆಚ್ ಹಾಕಿದ್ದ? ಇದರ ಹಿಂದೆ ಇನ್ನು ದೊಡ್ಡ ಜಾಲವೇನಾದರೂ ಇದೆಯೇ? ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿಷೇಧಿತ ಮಾದಕ ವಸ್ತುವಿನ ವಿರುದ್ಧ ಸಿಂಹಸ್ವಪ್ನವಾಗಿ ಯಶಸ್ವಿ ಕಾರ್ಯಾಚರಣೆ ನಡೆಸಿದ ವಿನೋಬನಗರ ಪೊಲೀಸರ ದಕ್ಷತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಾರ್ಯಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್.ಬಿ ಐ.ಪಿ.ಎಸ್,ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರಿಯಪ್ಪ. ಕೆ.ಎಸ್.ಪಿ.ಎಸ್, ರವರ ಆದೇಶದಂತೆ ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ಡಿವೈಎಸ್ಪಿ ಸಂಜೀವ್ ಕುಮಾರ್.ಟಿ ರವರ ಮಾರ್ಗದರ್ಶನದಲ್ಲಿ, ವಿನೋಬನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್, ಸಂತೋಷ್ ಕುಮಾರ್.ಡಿ.ಕೆ, ರವರ ನೇತೃತ್ವದಲ್ಲಿ,ವಿನೋಬನಗರ ಪೊಲೀಸ್ ಠಾಣೆಯ ಪಿ.ಎಸ್.ಐ, ತಿರುಮಲೇಶ್. ಜಿ, ಹಾಗೂ ಸಿಬ್ಬಂದಿಗಳಾದ ಸಂತೋಷ್. ಟಿ,ಯೊಗೇಶ್,ವಿಜಯ ಕುಮಾರ್, ಅರುಣ್ ಕುಮಾರ್,ಮನುಶಂಕರ್ ರವರನ್ನೊಳಗೊಂಡ ತಂಡವು ಮಿಂಚಿನ ಧಾಳಿ ನಡೆಸಿತ್ತು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment