ಸಚಿವ ಸ್ಥಾನಕ್ಕಾಗಿ ದೆಹಲಿಯತ್ತ ಬೇಳೂರು ಗೋಪಾಲಕೃಷ್ಣ ಪಯಣ: ‘ನಾನೂ ಆಕಾಂಕ್ಷಿ’ ಎಂದ ಶಾಸಕ
ಸಚಿವ ಸ್ಥಾನಕ್ಕಾಗಿ ದೆಹಲಿಯತ್ತ ಬೇಳೂರು ಗೋಪಾಲಕೃಷ್ಣ ಪಯಣ: ‘ನಾನೂ ಆಕಾಂಕ್ಷಿ’ ಎಂದ ಶಾಸಕ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕುರಿತು ವಿಧಾನ ಸೌಧದ ಕೆಂಗಲ್ ಗೇಟ್ ಬಳಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. 18-19 ರೊಳಗೆ ಸಂಪುಟ ಕಸರತ್ತು ಮುಗಿಯುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ವಿಸ್ತರಣೆಗೆ ಮುಹೂರ್ತ: ಆಷಾಢ ಮುಗಿದ ಬಳಿಕವೇ ಸಂಪುಟ ವಿಸ್ತರಣೆ ಎಂಬ ಚರ್ಚೆಗಳ ನಡುವೆ, “ಆಷಾಢ ಅನ್ನೋ ಪ್ರಶ್ನೆ ಏನೂ ಇಲ್ಲ, ಜುಲೈ 18-19 ರ ಒಳಗಾಗಿ ಈ ಪ್ರಕ್ರಿಯೆ ಮುಗಿಯಬಹುದು” ಎಂದು ಶಾಸಕರು ಅಂದಾಜಿಸಿದ್ದಾರೆ.
ಸಿಎಂ ದೆಹಲಿ ಪ್ರವಾಸ: ಮುಖ್ಯಮಂತ್ರಿಗಳು ಇಂದು ದೆಹಲಿಗೆ ತೆರಳುತ್ತಿದ್ದಾರೆ. ಆದರೆ ಅವರು ಬೇರೆ ಕೆಲಸದ ನಿಮಿತ್ತ ಹೋಗುತ್ತಿರುವುದಾಗಿ ಹೇಳುತ್ತಿದ್ದಾರೆ. ಅದು ಹೈಕಮಾಂಡ್ ಭೇಟಿಗಾಗಿಯೇ ಅಥವಾ ಬೇರೆ ಕಾರಣಕ್ಕಾಗಿಯೇ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದರು.
ಗುರುಗಳ ಸೂಚನೆ ಮತ್ತು ವಿಳಂಬ: ಮುಖ್ಯಮಂತ್ರಿಗಳು ಆಷಾಢದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಕೆಲವು ಸೂಚನೆಗಳ ಮೇರೆಗೆ ತಮ್ಮ ಗುರುಗಳು ಹೇಳಿದಂತೆ ಕೇಳಬೇಕಿರುವುದರಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ ಶಾಸಕರ ದಂಡು: ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಈಗಾಗಲೇ ಜಿಲ್ಲಾವಾರು ಮತ್ತು ಸಮಾಜವಾರು ಆಧಾರದ ಮೇಲೆ ಹಕ್ಕು ಮಂಡಿಸಲು ಅನೇಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಬೇಡಿಕೆಯನ್ನು ತಳ್ಳಿಹಾಕಲು ಬರುವುದಿಲ್ಲ ಎಂದು ಗೋಪಾಲಕೃಷ್ಣ ಹೇಳಿದರು.
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ತಾವು ಕೂಡ ಸಚಿವ ಸ್ಥಾನದ ರೇಸ್‌ನಲ್ಲಿದ್ದು, ಮುಖ್ಯಮಂತ್ರಿಗಳ ನಂತ್ರ ತಾವೂ ದೆಹಲಿಗೆ ಹೋಗುವ ಆಲೋಚನೆಯಲ್ಲಿದ್ದಾರೆ. ಮಂತ್ರಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್, ರಾಜ್ಯ ನಾಯಕರು, ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಸೇರಿ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment