ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ತರಾಟೆ : ಅರ್ಜಿ ಸಲ್ಲಿಕೆಯಾಗದಿದ್ದರೂ ನಿರಾಕರಿಸಲಾಗಿದೆ ಎಂದು ವರದಿ ಮಾಡುವುದು ತಪ್ಪು; ಸಿಜೆಐ ನ್ಯಾಯಮೂರ್ತಿ ಸೂರ್ಯಕಾಂತ್
ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ತರಾಟೆ : ಅರ್ಜಿ ಸಲ್ಲಿಕೆಯಾಗದಿದ್ದರೂ ನಿರಾಕರಿಸಲಾಗಿದೆ ಎಂದು ವರದಿ ಮಾಡುವುದು ತಪ್ಪು; ಸಿಜೆಐ ನ್ಯಾಯಮೂರ್ತಿ ಸೂರ್ಯಕಾಂತ್
ಹೊಸದಿಲ್ಲಿ ; ದಿಲ್ಲಿಯಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎನ್ನಲಾದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶುಕ್ರವಾರ ಖಂಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಯಾವುದೇ ರಿಟ್ ಅರ್ಜಿ ಸಲ್ಲಿಕೆಯಾಗಿಲ್ಲ. ಕೇವಲ ಒಂದು ಮನವಿ ಪತ್ರ ಬಂದಿತ್ತು. ಆದರೂ, ಸುಪ್ರೀಂ ಕೋರ್ಟ್ ವಿಚಾರಣೆಗೆ ನಿರಾಕರಿಸಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಇದು ‘‘ಬೇಜವಾಬ್ದಾರಿ ವರದಿಗಾರಿಕೆ’’ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಹಿರಿಯ ವಕೀಲ ಶೋಯಿಬ್ ಅಲಂ ಅವರು ಪ್ರಕರಣವೊಂದನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಉಲ್ಲೇಖಿಸಿದಾಗ ಮುಖ್ಯ ನ್ಯಾಯಮೂರ್ತಿಗಳು ಈ ಸ್ಪಷ್ಟೀಕರಣ ನೀಡಿದರು.
‘‘ಪ್ರಕರಣವನ್ನು ಪಟ್ಟಿ ಮಾಡಲು ನಾನು ನಿರಾಕರಿಸಿದ್ದೇನೆ ಎಂದು ಮಾಧ್ಯಗಳು ಸುಳ್ಳು ವರದಿ ಮಾಡಿವೆ. ಕೇವಲ ಒಂದು ಮನವಿ ಮಾತ್ರ ಸಲ್ಲಿಕೆಯಾಗಿದೆ’’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ತಾನು ಈ ವಿಷಯವನ್ನು ಸುಪ್ರೀಂ ಕೋರ್ಟ್‌ನ ನೋಂದಣಿ ವಿಭಾಗದ ಮೂಲಕ ಖಚಿತಪಡಿಸಿಕೊಂಡಿರುವುದಾಗಿ ತಿಳಿಸಿದರು.
ವರದಿಗಳನ್ನು ‘‘ಅಸಂಭಾವ್ಯ ಮತ್ತು ಬೇಜವಾಬ್ದಾರಿಯುತ’’ ಎಂದು ಕರೆದ ಸೂರ್ಯಕಾಂತ್, ಕಳೆದ ಎರಡು ದಿನಗಳಿಂದ, ಈ ವಿಷಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ನೀಡಲಾಗುತ್ತಿದೆ. ಇಂದು ಬೆಳಗ್ಗೆ 10 ಗಂಟೆವರೆಗೆ ನ್ಯಾಯಾಲಯಕ್ಕೆ ಒಂದೇ ಒಂದು ಪುಟ ಕೂಡ ಸಲ್ಲಿಕೆಯಾಗಿಲ್ಲ. ಅದು ಮಿಶ್ರಾ ಅಥವಾ ಯಾರೋ ಒಬ್ಬರು ಕಳುಹಿಸಿದ ಮನವಿ. ಆ ಮನವಿಯನ್ನು ನಾನು ರಿಟ್ ಅರ್ಜಿ ಎಂದು ಪರಿಗಣಿಸಲು ಹೇಗೆ ಸಾಧ್ಯ ? ಎಂದು ಅವರು ಪ್ರಶ್ನಿಸಿದ್ದಾರೆ.
ಬುಧವಾರ ವಕೀಲ ನರೇಂದ್ರ ಮಿಶ್ರಾ ಅವರು, ದಿಲ್ಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸ್ ದೌರ್ಜನ್ಯ ಆರೋಪದ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಮೌಖಿಕವಾಗಿ ವಿಷಯ ಉಲ್ಲೇಖಿಸಿ ವಿಚಾರಣೆಗೆ ಕೋರಿದ್ದರು. ಈ ವಿನಂತಿಯನ್ನು ಪುರಸ್ಕರಿಸಲು ನಿರಾಕರಿಸಿದ ಸೂರ್ಯಕಾಂತ್ ಅವರು, ‘‘ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಮತ್ತು ನಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ’’ ಎಂದು ಹೇಳಿದ್ದರು.
ಪೊಲೀಸ್ ಕೃತ್ಯವನ್ನು ತೋರಿಸುತ್ತದೆ ಎನ್ನಲಾದ ವೀಡಿಯೋಗಳನ್ನು ವೀಕ್ಷಿಸುವಂತೆ ವಕೀಲರು ಮಾಡಿದ ವಿನಂತಿಯನ್ನು ನ್ಯಾಯಾಲಯ ನಿರಾಕರಿಸಿತ್ತು. ಮೌಖಿಕ ಉಲ್ಲೇಖದ ಸಮಯದಲ್ಲಿ ಈ ವೀಡಿಯೊಗಳನ್ನು ಪರಿಶೀಲಿಸಲು ತಮಗೆ ಆಶಕ್ತಿಯಿಲ್ಲ ಎಂದು ಪೀಠ ಅಭಿಪ್ರಾಯಿಸಿತ್ತು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment