ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರಕಾರ ಚಿಂತನೆ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರಕಾರ ಚಿಂತನೆ



ಬೆಂಗಳೂರು: ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ (NPS) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ (OPS)ಯನ್ನು ಮರು ಜಾರಿಗೆ ತರಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಸುಮಾರು 5.7 ಲಕ್ಷ ಸರ್ಕಾರಿ ನೌಕರರು ಇದ್ದು, ಅವರಲ್ಲಿ 2.8 ಲಕ್ಷಕ್ಕೂ ಹೆಚ್ಚು ಮಂದಿ ಹೊಸ ಪಿಂಚಣಿ ಯೋಜನೆ (NPS) ವ್ಯಾಪ್ತಿಯಲ್ಲಿದ್ದಾರೆ. 2006ರ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲ ನೌಕರರು ಎನ್‌ಪಿಎಸ್ ಅಡಿಯಲ್ಲಿ ಸೇರಿದ್ದಾರೆ.

ಸರ್ಕಾರಿ ನೌಕರರ ಸಂಘವು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ, ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.

ಪ್ರಸ್ತುತ ರಾಜ್ಯ ಸರ್ಕಾರ ಪ್ರತಿ ವರ್ಷ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಾಗಿ ಸುಮಾರು 1.2 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದೆ. ಹಳೆಯ ಪಿಂಚಣಿ ಯೋಜನೆ ಜಾರಿಯಾದರೆ ಸರ್ಕಾರದ ಮೇಲಿನ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮ ತಕ್ಷಣ ಕಾಣಿಸದಿದ್ದರೂ, ಮುಂದಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ನೌಕರರು ನಿವೃತ್ತಿಯಾದ ಬಳಿಕ ಹಣಕಾಸಿನ ಹೊರೆ ಹೆಚ್ಚುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ತರುವ ಭರವಸೆ ನೀಡಿದ್ದಾರೆ.

ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಸಕಾರಾತ್ಮಕ ನಿರ್ಧಾರ ಹೊರಬರಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಇತರ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಹೇಗೆ ಜಾರಿಯಾಗಿದೆ ಎಂಬುದನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿ ರಾಜಸ್ಥಾನ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಅಂತಿಮ ವರದಿಯನ್ನು ಇನ್ನೂ ಸರ್ಕಾರಕ್ಕೆ ಸಲ್ಲಿಸಿಲ್ಲ.

ಪಶ್ಚಿಮ ಬಂಗಾಳವು ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರಲಿಲ್ಲ. ಮತ್ತೊಂದೆಡೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಎನ್‌ಪಿಎಸ್‌ಗೆ ಪರ್ಯಾಯವಾಗಿ ಕೊಡುಗೆ ಆಧಾರಿತ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೆ, ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳು ಸಚಿವ ಸಂಪುಟದ ನಿರ್ಧಾರ ಹಾಗೂ ಬಜೆಟ್ ಮೂಲಕ ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಿವೆ.

ಪಿಂಚಣಿ ಯೋಜನೆ ಮಾತ್ರವಲ್ಲದೆ, ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾಗಿ ವೇತನ ಮತ್ತು ಭತ್ಯೆ ನೀಡಬೇಕು ಎಂಬ ಬೇಡಿಕೆಯನ್ನೂ ನೌಕರರ ಸಂಘ ಸರ್ಕಾರದ ಮುಂದೆ ಇಟ್ಟಿದೆ. ಈ ಬೇಡಿಕೆಯನ್ನು ಏಳನೇ ವೇತನ ಆಯೋಗವೂ ಶಿಫಾರಸು ಮಾಡಿದೆ.

ಮುಂಬರುವ ಎರಡು ವರ್ಷಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ