ನಮ್ಮ ವ್ಯಕ್ತಿತ್ವವೇ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ರಹದಾರಿಯಾಗುತ್ತದೆ-ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ
ನಮ್ಮ ವ್ಯಕ್ತಿತ್ವವೇ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ರಹದಾರಿಯಾಗುತ್ತದೆ-ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ
ಸಾಗರ : ಪ್ರತಿಯೊಬ್ಬರೂ ಅನುಕರಣೀಯ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ನಮ್ಮ ವ್ಯಕ್ತಿತ್ವವೇ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ರಹದಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ತಿಳಿಸಿದರು.
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಕಾನ್ಲೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯಮನೂರಪ್ಪ ಕಾಯಣ್ಣ ಅವರಿಗೆ ವಿವಿಧ ಶಿಕ್ಷಕ ಸಂಘಟನೆ ಮೂಲಕ ನೀಡಲಾದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವೃತ್ತಿ ಜೀವನ ಸಾರ್ಥಕಗೊಳಿಸಿಕೊಳ್ಳುವುದು ಅವರು ತೊಡಗಿಸಿಕೊಳ್ಳುವ ಕಾರ್ಯವನ್ನು ಅವಲಂಭಿಸಿರುತ್ತದೆ. ನಮಗೆ ಅವಕಾಶ ಸಿಕ್ಕಾಗ ನಿಸ್ವಾರ್ಥವಾಗಿ ಸೇವೆ ಮಾಡುವತ್ತ ಗಮನ ಹರಿಸಬೇಕು. ಅನೇಕ ಅವಕಾಶಗಳು ಸಿಕ್ಕಿದರೂ ಅವುಗಳನ್ನು ತಿರಸ್ಕರಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೌನದಿಂದ ಮಾರ್ಗದರ್ಶ ನೀಡುವ ರೀತಿಯಲ್ಲಿ ಯಮನೂರಪ್ಪ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ಉನ್ನತ ಸ್ಥಾನ ಸಿಕ್ಕಾಗ ಅವರಿಂದ ಉತ್ತಮ ಕೆಲಸ ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಯಮನೂರಪ್ಪ ಅವರು ನಿರಂತರ ಪ್ರಯತ್ನಿಸಿದವರು ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಮನೂರಪ್ಪ ಕಾಯಣ್ಣ, ಬಡತನದಿಂದ ಬಂದ ನನಗೆ ಕಷ್ಟಸುಖದ ಎರಡೂ ಅರಿವಿದೆ. ಸೇವೆ ನನ್ನ ವೃತ್ತಿಜೀವನದ ಮೊದಲ ಆದ್ಯತಾ ಕ್ಷೇತ್ರವಾಗಿದೆ. ಉತ್ತಮ ಸೇವೆ ಬದುಕಿನ ಮಾರ್ಗಸೂಚಿಯಾಗಬೇಕು ಎನ್ನುವ ಉದ್ದೇಶ ಇರಿಸಿಕೊಂಡು ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿಕ್ಷಕ ವೃತ್ತಿ ಸುಂದರ ಸಮಾಜ ನಿರ್ಮಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಜವಾಬ್ದಾರಿಯುತವಾಗಿ ನಡೆದುಕೊಂಡು ನಮ್ಮಹೊಣೆಗಾರಿಕೆ ನಿಭಾಯಿಸಬೇಕಾಗುತ್ತದೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಆರ್. ನಾಯ್ಕ್, ಪ್ರಮುಖರಾದ ಮಹಾಬಲೇಶ್ವರ್, ದತ್ತಾತ್ರೇಯ ಭಟ್, ಗಜೇಂದ್ರ, ಉಮೇಶ್, ಡಾ. ಅನ್ನಪೂರ್ಣ, ವಿ.ಟಿ.ಸ್ವಾಮಿ, ಉಮೇಶ್ ಇನ್ನಿತರರು ಹಾಜರಿದ್ದರು.



Comments
Post a Comment