ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಕೈಬಿಡಲು ಶಿಫಾರಸು
ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಕೈಬಿಡಲು ಶಿಫಾರಸು
ಬೆಂಗಳೂರು: ಶರಾವತಿ ವನ್ಯಜೀವಿ ಅಭಯಾರಣ್ಯದೊಳಗೆ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (ಪಿಎಸ್‌ಪಿ) ಜಾರಿ ಕೈಬಿಡುವಂತೆ ತಜ್ಞರ ಸಮಿತಿಯು ಶಿಫಾರಸು ಮಾಡಿದೆ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಯೋಜನೆಯನ್ನು ಪ್ರಶ್ನಿಸಿ ಸಾಗರದ ಪರಿಸರವಾದಿ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ.ರವೀಂದ್ರನಾಥ ಶಾನಬಾಗ್ ಮತ್ತು ಶಿವಮೊಗ್ಗದ ಸಿ.ಬಿ.ಮನೋಹರ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಶುಕ್ರವಾರ ಸಿಜೆ ವಿಭು ಬಖ್ರು ಮತ್ತು ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಅರ್ಜಿದಾರರ ಪರ ವಕೀಲರಾದ ಬಿ.ವಿ. ವಿದ್ಯುಲ್ಲತಾ, ''ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ರಚಿಸಿದ ಮೂವರು ಸದಸ್ಯರ ತಜ್ಞರ ಸಮಿತಿಯು ಶರಾವತಿ ವನ್ಯಜೀವಿ ಅಭಯಾರಣ್ಯದೊಳಗೆ ಪ್ರಸ್ತಾಪಿಸಲಾದ ಶರಾವತಿ ಜಲವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ,'' ಎಂದರು.
ಅಲ್ಲದೆ, ''ತಜ್ಞರ ಸಮಿತಿಯು ಯೋಜನೆಯಿಂದ ಅಭಯಾರಣ್ಯದ ಪರಿಸರ, ಜೀವವೈವಿಧ್ಯ ಮತ್ತು ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಯೋಜನೆಗೆ ಅನುಮೋದನೆ ನೀಡಬಾರದು ಎಂದು ಶಿಫಾರಸು ಮಾಡಿದೆ,'' ಎಂದರು.
ಆಗ ಕೇಂದ್ರ ಸರಕಾರದ ಪರ ಹಾಜರಾದ ಎಎಸ್‌ಜಿ ಅರವಿಂದ್ ಕಾಮತ್, 2025ರ ಡಿ.27ರಿಂದ 30ರವರೆಗೆ ಸ್ಥಳ ಪರಿಶೀಲನೆ ನಡೆಸಿ ತಜ್ಞರ ಸಮಿತಿ ಸಲ್ಲಿಸಿರುವ ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅಲ್ಲದೆ, ವರದಿ ಆಧರಿಸಿ ವನ್ಯಜೀವಿ ಮಂಡಳಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹಾಗಾಗಿ, ಮಂಡಳಿಯ ನಿಲುವು ತಿಳಿಸಲು ಕಾಲಾವಕಾಶ ಕೋರಿದರು.
''ಈ ಯೋಜನೆಯು ಪರಿಸರ ಸಮಗ್ರತೆಗೆ ಗಣನೀಯ ಮತ್ತು ಬದಲಾಯಿಸಲಾಗದ ಹಾನಿ ಉಂಟು ಮಾಡುವ ಸಾಧ್ಯತೆಯಿದೆ. ರಾಷ್ಟ್ರೀಯ ಆರ್ಥಿಕತೆಯ ದೀರ್ಘಕಾಲೀನ ಸುಸ್ಥಿರತೆಗೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಸಮಿತಿ ಹೇಳಿದೆ. ಸಮಗ್ರವಾಗಿ ನಿರ್ಣಯಿಸಿದಾಗ, ಯೋಜನೆಯು ನೀಡುವ ಸೀಮಿತ ಕಾರ್ಯಾಚರಣೆಯ ಪ್ರಯೋಜನವು ಬದಲಾಯಿಸಲಾಗದ ಪರಿಸರ ಮತ್ತು ಸಾಮಾಜಿಕ ವೆಚ್ಚಗಳಿಗಿಂತ ಹೆಚ್ಚು ನಷ್ಟ ಉಂಟು ಮಾಡಲಿದೆ. ಜೀವವೈವಿಧ್ಯ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಸಂರಕ್ಷಿತ ಪ್ರದೇಶದೊಳಗಿನ ಅಪರೂಪದ ಮತ್ತು ಸ್ಥಳೀಯ ಪ್ರಭೇದಗಳ ಉಳಿವಿನ ಮೇಲೆ ದೀರ್ಘಕಾಲೀನ ಪರಿಣಾಮಗಳಾಗಲಿವೆ,'' ಎಂದು ವರದಿಯಲ್ಲಿ ವಿವರಿಸಲಾಗಿದೆ.
ವಿಚಾರಣೆಯನ್ನು ಅ.10ಕ್ಕೆ ಮುಂದೂಡಿಕೆ
ಆ ಹಿನ್ನೆಲೆಯಲ್ಲಿ ನ್ಯಾಯಾಲಯ, ತಜ್ಞರ ಸಮಿತಿಯ ವರದಿ ಮತ್ತು ವನ್ಯಜೀವಿ ಮಂಡಳಿ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದನ್ನು ದಾಖಲಿಸಿ ಕೇಂದ್ರ ಸರಕಾರಕ್ಕೆ ಸಮಯ ನೀಡಿ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿತು.
2026ರ ಮಾ.10ರಂದು ವಿಭಾಗೀಯ ಪೀಠ, ಯೋಜನೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಅಭಯಾರಣ್ಯ ಅಥವಾ ಅದರ ಪರಿಸರ ಸೂಕ್ಷ್ಮ ವಲಯದೊಳಗೆ ಯಾವುದೇ ರೀತಿಯ ಕಾಮಗಾರಿಗಳನ್ನು ನಡೆಸದಂತೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶವೊಂದನ್ನು ಹೊರಡಿಸಿದೆ.
''ವನ್ಯಜೀವಿಗಳ ಪ್ರಯೋಜನಕ್ಕಾಗಿ ಮತ್ತು ಬೇಡದ ಉದ್ದೇಶಗಳಿಗಾಗಿ ವನ್ಯಜೀವಿ ಅಭಯಾರಣ್ಯ ಪ್ರದೇಶ ಬಳಕೆಗೆ ಅನುಮೋದನೆ ನೀಡುವ ಅಧಿಕಾರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಇಲ್ಲ. ಈ ನಿಟ್ಟಿನಲ್ಲಿ, ವನ್ಯಜೀವಿ ರಕ್ಷಣಾ ಕಾಯಿದೆ- 1972ರ ಕಲಂ 29ರಡಿ ವಿಧಿಸಲಾದ ನಿರ್ಬಂಧವನ್ನು ಗಮನದಲ್ಲಿರಿಸಿಕೊಂಡು ಶರಾವತಿ ಕಣಿವೆಯ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದಲ್ಲಿಕೈಗೆತ್ತಿಕೊಳ್ಳಲಿರುವ ಉದ್ದೇಶಿತ ಯೋಜನೆಗೆ ಯಾವುದೇ ಅನುಮೋದನೆ ನೀಡಬಾರದು,'' ಎಂಬುದು ಅರ್ಜಿದಾರರ ವಾದವಾಗಿದೆ. ಈ ಯೋಜನೆಯು ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶದಲ್ಲಿ ಮತ್ತು ಅಳಿವಿನಂಚಿನಲ್ಲಿರುವ 'ಸಿಂಹ ಬಾಲದ ಮಕಾಕ್' ನಂತಹ ಪ್ರಾಣಿಗಳ ಆವಾಸ ಸ್ಥಾನದಲ್ಲಿಬರುವುದರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ರಾಜ್ಯಮಟ್ಟದ ಪತ್ರಿಕೆಯಿಂದ
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment