ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ; ವಾರಾಂತ್ಯದಲ್ಲಿ ದೆಹಲಿಯಲ್ಲಿ ಅಂತಿಮ ಚರ್ಚೆ ಸಾಧ್ಯ OBC ಕೋಟಾದಲ್ಲಿ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು?
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ; ವಾರಾಂತ್ಯದಲ್ಲಿ ದೆಹಲಿಯಲ್ಲಿ ಅಂತಿಮ ಚರ್ಚೆ ಸಾಧ್ಯ
OBC ಕೋಟಾದಲ್ಲಿ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು?
ಬೆಂಗಳೂರು: ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಲಭ್ಯತೆ ಕೊರತೆ ಹಾಗೂ ದೆಹಲಿಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಸ್ತರಣೆ ತಕ್ಷಣ ನಡೆಯುವ ಸಾಧ್ಯತೆ ಕ್ಷೀಣಿಸಿದೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿಗೆ ಮರಳಲಿದ್ದು, ವಾರಾಂತ್ಯದಲ್ಲಿ ಮತ್ತೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಪ್ರತಿಭಟನೆ ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸಂಪುಟ ವಿಸ್ತರಣೆ ವೇಳಾಪಟ್ಟಿಯಲ್ಲಿ ಬದಲಾವಣೆ ಉಂಟಾಗಬಹುದು ಎಂದು ಹೇಳಿದರು. ಸಂಪುಟ ವಿಸ್ತರಣೆಯನ್ನು ಅನಗತ್ಯವಾಗಿ ವಿಳಂಬಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೆಹಲಿಯ ಹೈ ಕಮಾಂಡ್ ಜೊತೆಗಿನ ಸಭೆ ಮುಂದೂಡಿಕೆ:ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಲು ಯೋಜಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಉಂಟಾದ ರಾಜಕೀಯ ಬೆಳವಣಿಗೆಗಳಿಂದ ಆ ಸಭೆ ನಡೆಯಲಿಲ್ಲ ಎಂದು ತಿಳಿದುಬಂದಿದೆ.
ಸಚಿವ ಸ್ಥಾನಕ್ಕೆ ಹಲವು ನಾಯಕರ ಹೆಸರು ಮುಂಚೂಣಿಯಲ್ಲಿ :
ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ವಲಯದಲ್ಲಿ ಹಲವು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರುಗಳು ಚರ್ಚೆಯಲ್ಲಿವೆ.ಮುಸ್ಲಿಂ ಸಮುದಾಯದಿಂದ ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್ ಹಾಗೂ ಸಲೀಂ ಅಹ್ಮದ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಲಿಂಗಾಯತ ಸಮುದಾಯದಿಂದ ಅಶೋಕ್ ಪಟ್ಟಣ, ಲಕ್ಷ್ಮಣ ಸವದಿ, ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಯಶವಂತ್ ರಾಯಗೌಡ ಹಾಗೂ ಅಪ್ಪಾಜಿ ನಾಡಗೌಡ ಅವರ ಹೆಸರುಗಳು ಚರ್ಚೆಯಲ್ಲಿದ್ದು, ಈ ಸಮುದಾಯದಿಂದ ಮೂವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಬಿಸಿ ಕೋಟಾದಲ್ಲಿ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಕೆಲವರ ಹೆಸರುಗಳು ಪರಿಗಣನೆಯಲ್ಲಿದ್ದರೆ, ಮಹಿಳಾ ಕೋಟಾದಡಿ ಎಂಎಲ್‌ಸಿ ಆರತಿ ಕೃಷ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ನಯನಾ ಮೋಟಮ್ಮ ಅವರ ಹೆಸರೂ ಚರ್ಚೆಗೆ ಬಂದಿದೆ.ಸಚಿವ ಸಂಪುಟ ವಿಸ್ತರಣೆಯ ಕುರಿತು ಅಂತಿಮ ನಿರ್ಧಾರ ದೆಹಲಿಯಲ್ಲಿ ನಡೆಯಲಿರುವ ಮುಂದಿನ ಸಭೆಯ ಬಳಿಕವೇ ಹೊರಬೀಳುವ ನಿರೀಕ್ಷೆ ಇದೆ.
ಇದರ ನಡುವೆ ಇಂದು ಬೆಳಿಗ್ಗೆ ಸಿಎಂ ಡಿಕೆ ಶಿವಕುಮಾರ್ ತಮ್ಮ ಬಣದ ಕೆಲವು ಶಾಸಕರ ಜೊತೆ ಪ್ರತೇಕೆ ಬೆಳಗಿನ ಉಪಹಾರ ಸೇವನೆ ಮಾಡಿದ್ದು, ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಸಹ ತಮ್ಮ ತಂಡದ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಈಗಾಗಲೇ ಇಬ್ಬರು ನಾಯಕರು ತಮ್ಮ ಕಡೆವರು ಸಚಿವ ಸಂಪುಟದಲ್ಲಿ ಯಾರ್ಯಾರು ಇರಬೇಕು ಅಂತ ಪಟ್ಟಿಯನ್ನ ಕಾಂಗ್ರೆಸ್ ಹೈ ಕಮಾಂಡ್ ಮುಂದೆ ಇಟ್ಟಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment