ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಮತ್ತು ಸ್ಥಳನಿಯುಕ್ತಿ (Posting) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಒಂದು ಮಹತ್ವದ ಸುತ್ತೋಲೆ
ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಮತ್ತು ಸ್ಥಳನಿಯುಕ್ತಿ (Posting) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಒಂದು ಮಹತ್ವದ ಸುತ್ತೋಲೆ
ಯನ್ನು ಹೊರಡಿಸಿದೆ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 35777/2025 ರಲ್ಲಿ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಹಿಂದೆ ದಿನಾಂಕ 30.03.2026 ರಂದು ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹಿಂಪಡೆದಿರುವ ಸರ್ಕಾರ, ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ನೌಕರರನ್ನು ಸುದೀರ್ಘ ಕಾಲ 'ಕಡ್ಡಾಯ ನಿರೀಕ್ಷೆ'ಯಲ್ಲಿ (Compulsory Waiting) ಇರಿಸುವುದರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಕೆಳಗಿನ ಪ್ರಮುಖ ನಿರ್ದೇಶನಗಳನ್ನು ನೀಡಿದೆ:
ಹೊಸ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು:
ಮುಂದಿನ ಹುದ್ದೆ ಸೂಚಿಸದೆ ವರ್ಗಾವಣೆ ಮಾಡುವಂತಿಲ್ಲ: ಸಾಮಾನ್ಯವಾಗಿ ಯಾವುದೇ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡುವಾಗ, ಅವರಿಗೆ ಮುಂದಿನ ಹುದ್ದೆಯನ್ನು (Next Posting) ಕಡ್ಡಾಯವಾಗಿ ಸೂಚಿಸಿಯೇ ವರ್ಗಾವಣೆ ಮಾಡಬೇಕು. ಹುದ್ದೆ ತೋರಿಸದೆ ಯಾರನ್ನೂ ವರ್ಗಾವಣೆ ಮಾಡುವಂತಿಲ್ಲ.
ಕಡ್ಡಾಯ ನಿರೀಕ್ಷೆ ಅವಧಿ ಗರಿಷ್ಠ 1 ತಿಂಗಳು ಮಾತ್ರ: ಕಾನೂನು ಸಂಬಂಧಿತ ಸಮಸ್ಯೆಗಳು, ಅಮಾನತು (Suspension), ಹಣದ ದುರ್ಬಳಕೆ, ಅಧಿಕಾರ ದುರ್ಬಳಕೆ ಹಾಗೂ ತೀವ್ರ ಸ್ವರೂಪದ ಇಲಾಖಾ ವಿಚಾರಣೆ ಎದುರಿಸುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಅನಿವಾರ್ಯ ಆಡಳಿತಾತ್ಮಕ ಕಾರಣಗಳಿಂದ ವರ್ಗಾವಣೆಗೊಂಡು ತಕ್ಷಣ ಸ್ಥಳನಿಯುಕ್ತಿ ನೀಡಲು ಸಾಧ್ಯವಾಗದಿದ್ದರೆ, ಅಂತಹ ನೌಕರರನ್ನು ಸಕ್ಷಮ ಪ್ರಾಧಿಕಾರಗಳ ಮಟ್ಟದಲ್ಲಿ ಗರಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷೆಯಲ್ಲಿರಿಸುವಂತಿಲ್ಲ.
ವಿಶೇಷ ಸಂದರ್ಭದಲ್ಲಿ ಸಿಎಂ ಪೂರ್ವಾನುಮೋದನೆ ಕಡ್ಡಾಯ: ಒಂದು ವೇಳೆ ವರ್ಗಾವಣೆಗೊಂಡ ನೌಕರರನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷೆಯಲ್ಲಿ ಮುಂದುವರಿಸುವುದು ಅನಿವಾರ್ಯವಾದರೆ, ಸಕ್ಷಮ ಪ್ರಾಧಿಕಾರಗಳು ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ಅಷ್ಟೇ ಅಲ್ಲದೆ, ಮಾನ್ಯ ಮುಖ್ಯಮಂತ್ರಿಯವರ ಪೂರ್ವಾನುಮೋದನೆ ಪಡೆದು ಗರಿಷ್ಠ ಮೂರು ತಿಂಗಳವರೆಗೆ ಮಾತ್ರ ಕಡ್ಡಾಯ ನಿರೀಕ್ಷೆಯಲ್ಲಿ ಇರಿಸಲು ಅವಕಾಶವಿರುತ್ತದೆ.
ಸರ್ಕಾರದ ಈ ನೂತನ ಆದೇಶದಿಂದಾಗಿ ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ಸರ್ಕಾರಿ ನೌಕರರನ್ನು ಅನಗತ್ಯವಾಗಿ ಸ್ಥಳನಿಯುಕ್ತಿ ನೀಡದೆ ತಿಂಗಳುಗಟ್ಟಲೆ ಕಡ್ಡಾಯ ನಿರೀಕ್ಷೆಯಲ್ಲಿ ಇರಿಸುವ ಪ್ರವೃತ್ತಿಗೆ ಬ್ರೇಕ್ ಬೀಳಲಿದ್ದು, ವರ್ಗಾವಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವಾ ನಿಯಮಗಳು-3) ಸರ್ಕಾರದ ಅಧೀನ ಕಾರ್ಯದರ್ಶಿಯಾದ ಪ್ರತಿಭಾ ಕೆ. ಅವರ ಸಹಿಯೊಂದಿಗೆ ಈ ಅಧಿಕೃತ ಆದೇಶ ಹೊರಬಿದ್ದಿದೆ
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment