SIR ಅಲರ್ಟ್- ರಾಜ್ಯದ 66.64 ಲಕ್ಷ ಜನರ ಮತದಾನದ ಹಕ್ಕಿಗೆ ಕಂಟಕ; ಬೆಂಗಳೂರಲ್ಲೇ 40.39 ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ! ಹೇಗಿದೆ ಜಿಲ್ಲಾವಾರು ವಿವರ

SIR ಅಲರ್ಟ್- ರಾಜ್ಯದ 66.64 ಲಕ್ಷ ಜನರ ಮತದಾನದ ಹಕ್ಕಿಗೆ ಕಂಟಕ; ಬೆಂಗಳೂರಲ್ಲೇ 40.39 ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ! ಹೇಗಿದೆ ಜಿಲ್ಲಾವಾರು ವಿವರ


ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಈಗ ಅಂತಿಮ ಹಾಗೂ ಅತ್ಯಂತ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಪ್ರಕ್ರಿಯೆಯ ಅಂತ್ಯಕ್ಕೆ ಸುಮಾರು 86.64 ಲಕ್ಷ (ಶೇ.15.63) ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗುವ ಭೀತಿ ಎದುರಾಗಿದೆ.

ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 'ಬಿಎಲ್‌ಒ'ಗಳು ನಡೆಸಿದ ಮನೆ-ಮನೆ ಸಮೀಕ್ಷೆಯಲ್ಲಿ ಇಷ್ಟೊಂದು ಬೃಹತ್‌ ಸಂಖ್ಯೆಯ 'ಎಎಸ್‌ಡಿಡಿಒ' (ಅನುಮಾನಾಸ್ಪದ/ಸ್ಥಳಾಂತರಗೊಂಡ/ಮೃತ/ದ್ವಿಪ್ರತಿ) ಮತದಾರರು ಪತ್ತೆಯಾಗಿದ್ದಾರೆ. ಜೂನ್‌ 30ರಿಂದ ಆರಂಭಗೊಂಡಿದ್ದ ಈ ಬೃಹತ್‌ ಪರಿಷ್ಕರಣೆ ಪ್ರಕ್ರಿಯೆಯು ಆಗಸ್ಟ್‌ 8ಕ್ಕೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್‌ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.

ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ಮತದಾರರ ಪೈಕಿ 59,050 ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಸಿದ ಪರಿಶೀಲನೆಯಲ್ಲಿ 86,64,501 ಮತದಾರರನ್ನು 'ಎಎಸ್‌ಡಿಡಿಒ' ಎಂದು ವರ್ಗೀಕರಿಸಲಾಗಿದೆ. ಈ ಪೈಕಿ ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವ ಸುಮಾರು 20 ಲಕ್ಷ ಮತದಾರರ ಹೆಸರು ಶಾಶ್ವತವಾಗಿ ಡಿಲೀಟ್‌ ಆಗಲಿದೆ. ಉಳಿದ 66 ಲಕ್ಷ ಮತದಾರರು ಮರುಸೇರ್ಪಡೆಗೆ ಜಾಗ್ರತೆ ವಹಿಸಬೇಕಿದೆ.

'ಎಎಸ್‌ಡಿಡಿಒ' ಅಂದರೇನು?

ಮತದಾರರ ಪಟ್ಟಿಯಲ್ಲಿ ಪತ್ತೆಯಾಗದ, ಸ್ಥಳಾಂತಗೊಂಡ, ಮೃತಪಟ್ಟ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಣಿಯಾಗಿರುವ ಎಲ್ಲರನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದೆ.

ಸ್ಥಳಾಂತರಗೊಂಡವರು (ಶಾಶ್ವತವಾಗಿ ಕ್ಷೇತ್ರ ಬದಲಾಯಿಸಿದವರು): 53.39 ಲಕ್ಷ (ಶೇ. 9.63)

ಮೃತಪಟ್ಟವರು (ಮರಣ ಪ್ರಮಾಣಪತ್ರ/ಸ್ಥಳ ಮಹಜರು ಆಧಾರದ ಮೇಲೆ): 15.14 ಲಕ್ಷ (ಶೇ. 2.73)

ಪತ್ತೆಯಾಗದವರು (ವಿಳಾಸದಲ್ಲಿ ಸಿಗದಿದ್ದವರು): 11.92 ಲಕ್ಷ (ಶೇ. 2.15)

ದ್ವಿಪ್ರತಿ ಮತದಾರರು (ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವವರು): 5.74 ಲಕ್ಷ (ಶೇ. 1.04)

ಸಹಿ ನಿರಾಕರಿಸಿದವರು(ನಮೂನೆ ಭರ್ತಿಗೆ ಒಪ್ಪದವರು): 42,725 (ಶೇ. 0.08)

ಬೆಂಗಳೂರಲ್ಲಿ 40 ಲಕ್ಷ ಮತದಾರರಿಗೆ ಕುತ್ತು!

ಇಡೀ ರಾಜ್ಯದಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಮತದಾರರ ಹೆಸರು ಕೈಬಿಟ್ಟು ಹೋಗುವ ಲಕ್ಷಣಗಳಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ, ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 40.39 ಲಕ್ಷ 'ಎಎಸ್‌ಡಿಡಿಒ' ಮತದಾರರನ್ನು ಗುರುತಿಸಲಾಗಿದೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 1.03 ಕೋಟಿ ಮತದಾರರಿದ್ದು, ಈವರೆಗೆ 48.67 ಲಕ್ಷ ಮಂದಿಯ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಗಣತಿ ನಮೂನೆಗಳನ್ನು ಭರ್ತಿ ಮಾಡಿ ಹಿಂದಿರುಗಿಸಿರುವ 14.81 ಲಕ್ಷ ಮತದಾರರ ನಮೂನೆಗಳ ಡಿಜಿಟಲೀಕರಣ ಬಾಕಿಯಿದೆ.

ಜಿಬಿಎ ನಂತರ ಮೈಸೂರು ಜಿಲ್ಲೆಯಲ್ಲಿ 4.31 ಲಕ್ಷ, ಕಲಬುರಗಿ 3.86 ಲಕ್ಷ, ಬೆಳಗಾವಿ 3.65 ಲಕ್ಷ, ವಿಜಯಪುರ 2.27 ಲಕ್ಷ, ಧಾರವಾಡ 2.18 ಲಕ್ಷ ಮತ್ತು ರಾಯಚೂರು ಜಿಲ್ಲೆಯಲ್ಲಿ 2.16 ಲಕ್ಷ ಎಎಸ್‌ಡಿಡಿಒ ಮತದಾರರನ್ನು ಪತ್ತೆ ಮಾಡಲಾಗಿದೆ.

ಕರ್ನಾಟಕದಲ್ಲಿ 'SIR' ಬಿರುಗಾಳಿ, 47 ಲಕ್ಷ ಜನರ ಹೆಸರು ಡಿಲೀಟ್‌?, ಆಯೋಗ ನೀಡಿದ ಶಾಕಿಂಗ್ ಮಾಹಿತಿ

ಇತರ ಜಿಲ್ಲೆಗಳ ಎಎಸ್‌ಡಿಡಿಒ ವಿವರ

ಮೈಸೂರು: 4.31 ಲಕ್ಷ

ಕಲಬುರಗಿ: 3.86 ಲಕ್ಷ

ಬೆಳಗಾವಿ: 3.65 ಲಕ್ಷ

ವಿಜಯಪುರ: 2.27 ಲಕ್ಷ

ಧಾರವಾಡ: 2.18 ಲಕ್ಷ

ರಾಯಚೂರು: 2.16 ಲಕ್ಷ

ನಮೂನೆ ಸಲ್ಲಿಕೆಯಾದ ಸಂಖ್ಯೆ

ಫಾರ್ಮ್-6 (ಹೊಸ ಮತದಾರರ ಸೇರ್ಪಡೆ) 3,32,874

ಫಾರ್ಮ್-6ಎ (ಎನ್‌ಆರ್‌ಐ/ ಸಾಗರೋತ್ತರ ಮತದಾರರು) 2,783

ಫಾರ್ಮ್-7 (ಹೆಸರು ಡಿಲಿಟ್‌) 30,696

ಫಾರ್ಮ್-8 (ವಿವರ ತಿದ್ದುಪಡಿ) 7,74,126

ಹೆಸರು ಬಿಟ್ಟುಹೋದರೂ ಆತಂಕ ಬೇಡ: ರಾಜ್ಯದ ಮುಖ್ಯ ಚುನಾವಣಾಧಿಕಾರಿ

ಅರ್ಹ ಯಾವುದೇ ಮತದಾರರ ಹೆಸರು ಕರಡು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ತೀವ್ರ ಎಚ್ಚರ ವಹಿಸಲಾಗಿದೆ. ಬಿಎಲ್‌ಒಗಳು ಈ 'ಎಎಸ್‌ಡಿಡಿಒ' ಮತದಾರರ ವಿವರವನ್ನು ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟ್‌ಗಳಿಗೆ ನೀಡಲಿದ್ದಾರೆ. ಒಂದು ವೇಳೆ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಲು ಸಂಪೂರ್ಣ ಅವಕಾಶವಿರುತ್ತದೆ. 2002ರ ಪಟ್ಟಿಯ ವಿವರ ನೀಡದ ಸುಮಾರು 29 ಲಕ್ಷ ಜನರ ಹೆಸರುಗಳನ್ನೂ ಸೇರ್ಪಡೆ ಮಾಡಲಾಗುತ್ತಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ತಿಳಿಸಿದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ