ಭದ್ರಾವತಿಯಲ್ಲಿ SIR ಕರ್ತವ್ಯ ವೇಳೆ ಮಹಿಳಾ BLO ಸಾವು
*ಭದ್ರಾವತಿಯಲ್ಲಿ SIR ಕರ್ತವ್ಯ ವೇಳೆ ಮಹಿಳಾ BLO ಸಾವು*
ಭದ್ರಾವತಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಬೂತ್ ಮಟ್ಟದ ಅಧಿಕಾರಿ (BLO) ಒಬ್ಬರು ಕರ್ತವ್ಯದ ವೇಳೆ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕೋಡಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಲ್ಲಾಪುರದ ಅಂಗನವಾಡಿ ಶಿಕ್ಷಕಿ ಹಾಗೂ BLO ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ (50) ಎಂದು ಗುರುತಿಸಲಾಗಿದೆ. SIR ಪ್ರಕ್ರಿಯೆಯ ಅಂಗವಾಗಿ ಕೋಡಿ ಹೊಸೂರು ಗ್ರಾಮದಲ್ಲಿ ಪಿಡಿಒ, BLO ಮಂಜುಳಾ ಹಾಗೂ ಸಹಾಯಕ ಸಿಬ್ಬಂದಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದರು.
ಈ ವೇಳೆ ಮಂಜುಳಾ ಏಕಾಏಕಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮಂಜುಳಾ ಅವರ ಮೃತದೇಹವನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ವೈದ್ಯಕೀಯ ವರದಿ ಹಾಗೂ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment