ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 3ರಂದು ಬೃಹತ್ ಪ್ರತಿಭಟನೆ-B.R. ಜಯಂತ್

ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 3ರಂದು ಬೃಹತ್ ಪ್ರತಿಭಟನೆ-B.R. ಜಯಂತ್

ಸಾಗರ : ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 3 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರೈತ ಸಹಕಾರಿ ವೇದಿಕೆ ಜಿಲ್ಲಾ ಸಂಚಾಲಕ ಬಿ.ಆರ್.ಜಯಂತ್ ತಿಳಿಸಿದರು.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9ಕ್ಕೆ ಆವಿನಹಳ್ಳಿಯಿಂದ ಸಾಗರದವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಯಲಿದ್ದು, ಗಾಂಧಿbಮೈದಾನದಲ್ಲಿ ಬೃಹತ್ ಸಭೆ ನಡೆಯಲಿದೆ. ನಂತರ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯನ್ನು ಒಳಗೊಂಡ 1996 ಗ್ರಾಮಗಳನ್ನು ಪರಿಸರಸೂಕ್ಷ್ಮ ಪ್ರದೇಶ ಎನ್ನುವ ಪಟ್ಟಿಯಲ್ಲಿ ಸೇರಿಸಿದ್ದು, ಈ ಗ್ರಾಮಗಳಿಂದ 10 ಕಿ.ಮೀ. ವ್ಯಾಪ್ತಿಯೂ ಪರಿಸರಸೂಕ್ಷ್ಮ ವ್ಯಾಪ್ತಿಗೆ ಒಳಪಡಲಿದೆ. ಶಿವಮೊಗ್ಗ ಜಿಲ್ಲೆಯ 500 ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪಟ್ಟಿಯಲ್ಲಿದ್ದು, ಸಾಗರ ತಾಲ್ಲೂಕಿನಲ್ಲಿ 125 ಕ್ಕೂ ಹೆಚ್ಚು ಗ್ರಾಮಗಳು ಸೇರಿವೆ. ಈಗಾಗಲೆ ಅಭಯಾರಣ್ಯ ಕಾಯ್ದೆಯಿಂದ ಹೈರಾಣಾಗಿರುವ ರೈತರು ಕಸ್ತೂರಿ ರಂಗನ್ ವರದಿಯೂ ಜಾರಿಯಾದರೆ ತೀವೃ ಸಂಕಷ್ಟ ಅನುಭವಿಸಬೇಕಾಗುತ್ತದೆ. 2012ರಿಂದ ಪದೇಪದೇ ಕರಡು ಅಧಿಸೂಚನೆ ಹೊರಡಿಸಿ ರೈತರನ್ನು ಆತಂಕಕ್ಕೆ ಒಳಪಡಿಸಲಾಗುತ್ತಿದೆ. ಇದೀಗ 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 25 ಕೊನೆ ದಿನವಾಗಿದೆ. ಅಷ್ಟರೊಳಗೆ ರೈತರು ಆಕ್ಷೇಪಣೆ ಸಲ್ಲಿಸಬೇಕು ಎಂದರು.

ಉದ್ದೇಶಿತ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಗ್ರಾಮೀಣ ಪ್ರದೇಶ ಮೂಲಭೂತ ಸೌಲಭ್ಯದಿಂದ ಸಂಪೂರ್ಣವಾಗಿ ವಂಚಿತವಾಗುತ್ತದೆ. ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಮಗಳನ್ನು ಗುರುತಿಸಿದ್ದಾರೆಯೆ ವಿನಃ ನಿಗಧಿತ ಸರ್ವೇ ನಂ. ಎಂದು ಗುರುತಿಸಿಲ್ಲ. ಇದರಿಂದ ಇಡೀ ಗ್ರಾಮದ ಜನರನ್ನು ಒಕ್ಕಲೆಬ್ಬಿಸುವ ಸಾಧ್ಯತೆ ಇದೆ. ಕಸೂರಿ ರಂಗನ್ ವರದಿ ಎಸಿ ರೂಮಿನಲ್ಲಿ ಕುಳಿತು ತಯಾರಿಸಿದ್ದಾಗಿದೆಯೆ ವಿನಃ, ದೈಹಿಕವಾಗಿ ಬಂದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ತಯಾರಿಸಿದ್ದಲ್ಲ. ಸ್ಥಳ ಪರಿಶೀಲನೆ ನಡೆಸಬೇಕು. ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಿ ಅವೈಜ್ಞಾನಿಕ ವರದಿ ಕೈಬಿಡುವಂತೆ ಒತ್ತಾಯಿಸಿ, ಪಕ್ಷಾತೀತವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಪ್ರಮುಖರಾದ ಚೇತನರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ಗಿರೀಶಗೌಡ, ಧರ್ಮೇಂದ್ರ ಶಿರವಾಳ ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ