ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, 40 ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿ: ಸಾಗರದಲ್ಲಿ ASP ಡಾ.ಬೆನಕ ಪ್ರಸಾದ್ ಸಲಹೆ

ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, 40 ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿ: ಸಾಗರದಲ್ಲಿ ASP ಡಾ.ಬೆನಕ ಪ್ರಸಾದ್ ಸಲಹೆ

ಆರ್‌ಬಿಡಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಮಹೇಶ್ ಡಿ. ಅವರಿಂದ ಇನ್ನಷ್ಟೂ ಸಾಮಾಜಿಕ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡುವ ಬಗ್ಗೆ ಹೇಳಿಕೆ


ಸಾಗರ ; ಮಾನವನ ದೇಹದಲ್ಲಿ ಕಣ್ಣು ನೋಡಲು ಚಿಕ್ಕದಾಗಿ ಕಂಡರೂ ಅದು ಅತ್ಯಂತ ಕ್ಲಿಷ್ಟಕರವಾದ ಅಂಗಗಳಲ್ಲಿ ಒಂದಾಗಿದೆ. ದೇಹದ ಯಾವುದೇ ಅಂಗದ ನೈಜ ಮೌಲ್ಯ ತಿಳಿಯುವುದು ಅದು ತನ್ನ ಕಾರ್ಯವನ್ನು ನಿಲ್ಲಿಸಿದಾಗ ಮಾತ್ರ. ಆದ್ದರಿಂದ ಮನುಷ್ಯರು ಎಂದಿಗೂ ತಮ್ಮ ಆರೋಗ್ಯದ ವಿಚಾರದಲ್ಲಿ ಅಲಕ್ಷ್ಯ ವಹಿಸಬಾರದು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಡಾ.ಬೆನಕ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಆರ್‌ಬಿಡಿ  'ಎಂಎಂ ಜೋಶಿ ಗಣೇಶ ನೇತ್ರಾಲಯ ಸಾಗರ' ಇವರ ಸಹಯೋಗದೊಂದಿಗೆ ಶನಿವಾರ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಜಗತ್ತಿನ ಸುಂದರ ದೃಶ್ಯಗಳನ್ನು ವೀಕ್ಷಿಸಲು ಮತ್ತು ಅನುಭವಿಸಲು ಕಣ್ಣಿನ ದೃಷ್ಟಿ ಅತ್ಯಗತ್ಯವಾಗಿದೆ. ವಯಸ್ಸಾಗುತ್ತಿದ್ದಂತೆ ಕಣ್ಣಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಪ್ರಸ್ತುತ ದಿನಗಳಲ್ಲಿ 30ರಿಂದ 40 ವರ್ಷ ದಾಟುತ್ತಿದ್ದಂತೆ ಕಾಣಿಸಿಕೊಳ್ಳುವ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳು ಕಣ್ಣಿನ ಆರೋಗ್ಯಕ್ಕೆ ಕುತ್ತು ತರುತ್ತವೆ ಹಾಗೂ ಒಳಗಿನ ನರಗಳ ಮೇಲೂ ಪ್ರಭಾವ ಬೀರುತ್ತವೆ. ಕಣ್ಣಿನಲ್ಲಿ ಪೊರೆ ಬಂದರೆ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿಕೊಳ್ಳಬಹುದು. ಪ್ರಸ್ತುತ ಹೈಪರ್ ಟೆನ್ಷನ್ ರೆಟಿನೋಪತಿ ಸೇರಿದಂತೆ ಹಲವು ರೀತಿಯ ತೊಂದರೆಗಳು ಸಾರ್ವಜನಿಕರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಹೀಗಾಗಿ 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ತೀವ್ರ ಸ್ವರೂಪದ ತೊಂದರೆಗಳನ್ನು ತಡೆಯಬಹುದು ಎಂದು ಅವರು ವಿವರಿಸಿದರು.

ತಮ್ಮ ಐಪಿಎಸ್ ತರಬೇತಿಯ ದಿನಗಳ ಘಟನೆಯೊಂದನ್ನು ನೆನಪಿಸಿಕೊಂಡ ಬೆನಕ ಪ್ರಸಾದ್, ಸಮಾಜದಲ್ಲಿ ವಿಶೇಷ ಚೇತನರು ಎದುರಿಸುವ ಕಷ್ಟ-ನಷ್ಟ ಹಾಗೂ ನೋವಿನ ಅರಿವು ಮೂಡಿಸಲು ಮತ್ತು ಸೇವೆಯಲ್ಲಿದ್ದಾಗ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ತಮಗೆ 15-20 ನಿಮಿಷಗಳ ಕಾಲ ಕಣ್ಣಿಗೆ ಬಟ್ಟೆ ಕಟ್ಟಿ ಕೆಲಸ ಮಾಡಲು ಸೂಚಿಸಲಾಗಿತ್ತು ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ನೀಡದೆ ಊಟ-ತಿಂಡಿ ತಿನ್ನಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕಣ್ಣಿನ ಸಾಮರ್ಥ್ಯ ಕುಗ್ಗಿ, ಕಡ್ಡಾಯವಾಗಿ ಕನ್ನಡಕ ಬಳಸಬೇಕಾದ ಸ್ಥಿತಿ ಬರುತ್ತದೆ. ಇಂತಹ ವಾತಾವರಣದಲ್ಲಿ ಕಣ್ಣಿನ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಇದೇ ವೇಳೆ ಉದ್ಯಮ ಬೆಳೆಸುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ನೀಡಿ, ಸಾಲು ಸಾಲು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಆರ್‌ಬಿಡಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮಹಾಬಲೇಶ್ವರ ಪಿ.ಶೆಟ್ಟಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ನಗರಸಭೆ ಮಾಜಿ ಸದಸ್ಯೆ ಮಧು ಮಾಲತಿ, ಗಣೇಶ ನೇತ್ರಾಲಯದ ನಿತಿನ್ ಶೇಟ್ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.

ಆರ್‌ಬಿಡಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಮಹೇಶ್, ವ್ಯವಸ್ಥಾಪಕಿ ಆಶಾ ರಾಣಿ ಹಾಗೂ ಉಭಯ ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ಸಮಾರಂಭದ ನಂತರ ದಿನವಿಡೀ ಸಾಗರದ ನೂರಾರು ಸಾರ್ವಜನಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಲಾಯಿತು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ