ಕರ್ನಾಟಕಕ್ಕೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯ : ಜನವರಿಯಲ್ಲಿ ನೂತನ ಪಕ್ಷ ಲೋಕಾರ್ಪಣೆ: ನಟ ಚೇತನ್ ಅಹಿಂಸಾ
ಕರ್ನಾಟಕಕ್ಕೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯ : ಜನವರಿಯಲ್ಲಿ ನೂತನ ಪಕ್ಷ ಲೋಕಾರ್ಪಣೆ: ನಟ ಚೇತನ್ ಅಹಿಂಸಾ
ಮಂಗಳೂರು/ಸಾಗರ ; ರಾಜ್ಯದಲ್ಲಿ ಆಡಳಿತ ನಡೆಸಿದ ಮತ್ತು ನಡೆಸುತ್ತಿರುವ ರಾಜಕೀಯ ಪಕ್ಷಗಳು ಸಮಾಜದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಹೀಗಾಗಿ ಬರುವ ಜನವರಿಯಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಆಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರಕಟಿಸಿದ್ದಾರೆ
ಕರಾವಳಿ ಮತ್ತು ಮಲೆನಾಡಿನ ಪ್ರವಾಸದಲ್ಲಿರುವ ಚೇತನ್ ಅಹಿಂಸಾ ಅವರು ಶನಿವಾರ ಮಂಗಳೂರಿನ ಲೇಡಿಹಿಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹೊಸ ಪಕ್ಷದ ಚಟುವಟಿಕೆಗಳ ಕುರಿತು ಮಾತನಾಡಿದ ಚೇತನ್, “ಕರ್ನಾಟಕಕ್ಕೆ ಇಂದು ಹೊಸ ರಾಜಕೀಯ ಪರ್ಯಾಯ, ಪರಿಹಾರ ಹಾಗೂ ಪರಿವರ್ತನೆ ಅಗತ್ಯವಿದೆ. ಸಂವಿಧಾನಾತ್ಮಕ ಮೂಲ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಹೊಂದಿರುವ ನೂತನ ರಾಜಕೀಯ ಪಕ್ಷದ ನೋಂದಣಿ ಪ್ರಕ್ರಿಯೆ ಪ್ರಸ್ತುತ ಅಂತಿಮ ಹಂತದಲ್ಲಿದೆ.
ಸಂವಿಧಾನಿಕ ಪದಗಳನ್ನು ಒಳಗೊಂಡ ಹೆಸರಿನೊಂದಿಗೆ ಬರುವ ಜನವರಿ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಿ ಪಕ್ಷವನ್ನು ಅಧಿಕೃತವಾಗಿ ಲಾಂಚ್ ಮಾಡಲಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ನಾವು ಯಾವುದೇ ಒಬ್ಬ ನಟನ ‘ಸ್ಟಾರ್ ಪವರ್’ ಅಥವಾ ‘ಅಭಿಮಾನಿ ಬಳಗ’ದ ಮೇಲೆ ಪಕ್ಷ ಕಟ್ಟುತ್ತಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ್, ಕಾನ್ಶೀರಾಮ್ ಅವರ ಸಿದ್ಧಾಂತಗಳ ಅಡಿಯಲ್ಲಿ ವರ್ಷಗಳಿಂದ ಜನಪರ ಹೋರಾಟ ನಡೆಸಿಕೊಂಡು ಬಂದಿರುವ ರೈತರು, ಚಳವಳಿಗಾರರು, ಬುದ್ಧಿಜೀವಿಗಳು ಹಾಗೂ ಯುವಕರನ್ನು ಸಂಘಟಿಸಿ ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾಮಾಣಿಕ ರಾಜಕೀಯ ಪ್ರಾದೇಶಿಕ ಚಳವಳಿಯನ್ನು ಗಟ್ಟಿಗೊಳಿಸುತ್ತಿದ್ದೇವೆ” ಎಂದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment