ಜಾತಿ ಪ್ರಮಾಣಪತ್ರ: ಮೂರನೇ ವ್ಯಕ್ತಿ ದೂರಿಗೆ ಕಿಮ್ಮತ್ತಿಲ್ಲ; ಹೈಕೋರ್ಟ್
ಜಾತಿ ಪ್ರಮಾಣಪತ್ರ: ಮೂರನೇ ವ್ಯಕ್ತಿ ದೂರಿಗೆ ಕಿಮ್ಮತ್ತಿಲ್ಲ; ಹೈಕೋರ್ಟ್
ಬೆಂಗಳೂರು: "ಅಪರಿಚಿತ ಅಥವಾ ಮೂರನೇ ವ್ಯಕ್ತಿಯ ದೂರು ಆಧರಿಸಿ ಯಾವುದೇ ವ್ಯಕ್ತಿಯ ಜಾತಿ ಪ್ರಮಾಣಪತ್ರ ರದ್ದುಪಡಿಸುವ ಅಧಿಕಾರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಇಲ್ಲ" ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಆದೇಶಿಸಿದೆ.
ಈ ಸಂಬಂಧ ಚನ್ನಪಟ್ಟಣ ತಾಲ್ಲೂಕು ಚಿಕ್ಕೇನಹಳ್ಳಿ ಬೈರಯ್ಯ (58) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ರಾಯಕೋಟೆ ಅವರ ವಾದ ಮನ್ನಿಸಿರುವ ನ್ಯಾಯಪೀಠ, ಬೈರಯ್ಯ ಅವರ ಜಾತಿ ಪ್ರಮಾಣಪತ್ರ ರದ್ದುಪಡಿಸಿ ರಾಮನಗರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) 2021ರ ಜುಲೈ 15ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
"ಯಾವುದೇ ಮೂರನೇ ವ್ಯಕ್ತಿಯ ದೂರು ಆಧರಿಸಿ; ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ (ನೇಮಕಾತಿ ಹಾಗೂ ಇತರೆ ವಿಷಯಕ್ಕಾಗಿ ಮೀಸಲಾತಿ) ಕಾಯ್ದೆ- 1990ರ ಕಲಂ 4ಎ ಅಡಿ ತಹಶೀಲ್ದಾರ್ ವಿತರಿಸುವ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವ ಅಧಿಕಾರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಇಲ್ಲ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆದರೆ, "ಕಾಯ್ದೆಯ ಕಲಂ 4ಎಫ್ ಅಡಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು" ಎಂದು ವಿವರಿಸಿದೆ.
ಪ್ರಕರಣ: ಬೈರಯ್ಯ ಪರಿಶಿಷ್ಟ ಪಂಗಡಕ್ಕೆ ಸೇರಿದ "ಜೇನು ಕುರುಬ" (ಎಸ್ಟಿ) ಎಂದು ಸ್ಥಳೀಯ ತಹಶೀಲ್ದಾರ್ 1977ರ ಜೂನ್ 8ರಲ್ಲಿ ಜಾತಿ ಪ್ರಮಾಣಪತ್ರ ನೀಡಿದ್ದರು.
ಇದಕ್ಕೆ ಕೊಳ್ಳೆಗಾಲದ "ಅತಾರ್ಕ್ಯ" ಕನ್ನಡ ಪಾಕ್ಷಿಕ ಕ್ರಾಂತಿಕಾರಿ ಸುದ್ದಿ ಪತ್ರಿಕೆ ಪ್ರಧಾನ ಸಂಪಾದಕ ಬಿ.ಶಿವರಾಜ್ "ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಅಕ್ರಮ ನಡೆದಿದೆ" ಎಂದು ಆರೋಪಿಸಿ; ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ್ದ ಘಟಕ ವರದಿ ಸಲ್ಲಿಸಿತ್ತು. ಈ ವರದಿ ಪರಿಶೀಲಿಸಿದ್ದ ರಾಮನಗರ ಡಿಸಿವಿಸಿ ಬೈರಯ್ಯನವರ ಜಾತಿ ಪ್ರಮಾಣ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬೈರಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಡಿಸಿವಿಸಿ ಪರ ಹಿರಿಯ ವಕೀಲ ಸಿ.ಜಗದೀಶ್ ವಾದ ಮಂಡಿಸಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment