ಷೇರುದಾರರ ಸಹಕಾರದಿಂದ ಸಹಕಾರ ಸಂಘಗಳು ಬೆಳೆಯುತ್ತವೆ- ಸರಕಾರಿ ಪಪೂ ಕಾಲೇಜು ಪ್ರಾಚಾರ್ಯ ಜಿ. ಪರಮೇಶ್ವರಪ್ಪ
ಷೇರುದಾರರ ಸಹಕಾರದಿಂದ ಸಹಕಾರ ಸಂಘಗಳು ಬೆಳೆಯುತ್ತವೆ- ಸರಕಾರಿ ಪಪೂ ಕಾಲೇಜು ಪ್ರಾಚಾರ್ಯ ಜಿ. ಪರಮೇಶ್ವರಪ್ಪ
ಸಾಗರ : ಸಹಕಾರಿ ಸಂಘಗಳು ಬೆಳೆಯಬೇಕಾದರೆ ಷೇರುದಾರರ ಸಹಕಾರ ಅತಿಮುಖ್ಯ. ಸರ್ಕಾರಿ ನೌಕರರ ಸೌಹಾರ್ದದ ಬೆಳವಣಿಗೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಸಹಕಾರ ನೀಡಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಪರಮೇಶ್ವರಪ್ಪ ತಿಳಿಸಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಹಕಾರಿ ತತ್ವದಡಿ ಕೆಲಸ ಮಾಡುವಾಗ ಹೆಚ್ಚು ಜಾಗೃತೆಯಿಂದ ಇರಬೇಕು. ಸರ್ಕಾರಿ ನೌಕರರಿಗೆ ಸೀಮಿತವಾದ ರಾಜ್ಯದ ಎರಡನೇ ಸಹಕಾರಿ ಸೌಹಾರ್ದ ಇದಾಗಿದೆ. ಸಂಸ್ಥೆ ಪ್ರಾರಂಭವಾಗಿ 12ವರ್ಷ ಕಳೆದಿದ್ದು ನೌಕರರಿಗೆ ಆರ್ಥಿಕ ಬೆನ್ನೆಲುಬಾಗಿ ಸ್ಪಂದಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಷೇರುದಾರ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಾಗ ಹೆಚ್ಚು ಜನರನ್ನು ಆಕರ್ಷಿಸಲು ಸಾಧ್ಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಸೌಹಾರ್ದಎಂದರೆ ಎಲ್ಲರೂ ಸೇರಿ ಮುನ್ನಡೆಯುವುದಾಗಿದೆ. ಸರ್ಕಾರಿ ನೌಕರರ ಸೌಹಾರ್ದ ನೌಕರರ ಆರ್ಥಿಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಈಗಾಗಲೆ ಸಾಲ ಸೌಲಭ್ಯವನ್ನು 4 ಲಕ್ಷ ರೂ. ನೀಡುತ್ತಿದ್ದು ಅದನ್ನು 10 ಲಕ್ಷ ರೂ.ಗೆ ಹೆಚ್ಚಿಸಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ನಾಗಭೂಷಣರಂತಹ ದಕ್ಷ ಅಧ್ಯಕ್ಷರು, ಆಡಳಿತ ಮಂಡಳಿ ಸಂಸ್ಥೆಯನ್ನು ಚನ್ನಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಎಚ್.ಆರ್. ನಾಗಭೂಷಣ್, ಸಂಸ್ಥೆಯು ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ನಿವೇಶನ ಖರೀದಿಗೆ ಚಿಂತನೆ ನಡೆದಿದೆ. ಠೇವಣಿ ಮೇಲೆ ಶೇ. 9 ಬಡ್ಡಿಯನ್ನು ನೀಡುತ್ತಿದ್ದು, ಇದು ಅನುಕೂಲವಾಗಲಿದೆ. ಖಾಲಿ ನಿವೇಶನ ಖರೀದಿ, ವಾಹನ ಖರೀದಿ ಸೇರಿ ಬೇರೆಬೇರೆ ಉದ್ದೇಶಕ್ಕೆ ಸಾಲಸೌಲಭ್ಯ ನೀಡಲಾಗುತ್ತಿದೆ. ಸಂಸ್ಥೆಯು ಶಿವಮೊಗ್ಗ ಜಿಲ್ಲಾ ವ್ಯಾಪ್ತಿ ಹೊಂದಿರುವುದರಿಂದ ಮುಂದಿನ ಆರ್ಥಿಕ ವರ್ಷದೊಳಗೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಅಗತ್ಯ ಕಾರ್ಯಕ್ರಮ ರೂಪಿಸಿದೆ. ಸಹಕಾರಿ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಲು ಮನವಿ ಮಾಡಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ನಾಯಕ್, ವಲಯ ಅರಣ್ಯಾಧಿಕಾರಿ ಅರವಿಂದ್ ಕೆ.ವಿ., ಲೆಕ್ಕ ಪರಿಶೋಧಕ ಬಿ.ವಿ. ರವೀಂದ್ರನಾಥ್ ಇನ್ನಿತರರು ಹಾಜರಿದ್ದರು.
ಶ್ರೀದೇವಿ ಮೋಹನ್ ಪ್ರಾರ್ಥಿಸಿದರು. ಕೆ.ಜಗನ್ನಾಥ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸೋಮರಾಜ್ ಬಿ. ವರದಿ ವಾಚನ ಮಾಡಿದರು. ಜಯಶ್ರೀ ವಂದಿಸಿದರು. ಮನೋಹರಪ್ಪ ನಿರೂಪಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment