ಬ್ಲ್ಯಾಕ್‌ಮೇಲ್ ಕಿರುಕುಳಕ್ಕೆ ಬಲಿಯಾದ ಅಪ್ರಾಪ್ತೆ; ಆರೋಪಿ ಪೊಲೀಸರ ವಶಕ್ಕೆ
ಬ್ಲ್ಯಾಕ್‌ಮೇಲ್ ಕಿರುಕುಳಕ್ಕೆ ಬಲಿಯಾದ ಅಪ್ರಾಪ್ತೆ; ಆರೋಪಿ ಪೊಲೀಸರ ವಶಕ್ಕೆ
ಸಾಗರ : ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆಯುವ ಕಿರುಕುಳ ಮತ್ತು ತಂತ್ರಜ್ಞಾನದ ದುರ್ಬಳಕೆಯ ಬ್ಲ್ಯಾಕ್‌ಮೇಲ್ ತಂತ್ರಗಳು ಇಂದು ಮತ್ತೊಂದು ಉದಯೋನ್ಮುಖ ಜೀವವನ್ನು ಬಲಿಪಡೆದಿವೆ. ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಯುವಕನ ಮಾನಸಿಕ ಕಿರುಕುಳ ತಾಳಲಾರದೆ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಘಟನೆಯ ಹಿನ್ನೆಲೆ: ಪರಿಚಯಸ್ಥ ಯುವಕ ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತೆಯ ಮನಸ್ಸು ಕೆಡಿಸಿ, ಮೊಬೈಲ್ ಕೊಡಿಸಿ ನಿರಂತರವಾಗಿ ಬೆನ್ನಟ್ಟಿದ್ದ ಎನ್ನಲಾಗಿದೆ. ವಿಷಯ ತಿಳಿದ ಪೋಷಕರು ಮೊಬೈಲ್ ಕಸಿದುಕೊಂಡು ಮಗಳಿಗೆ ಬುದ್ಧಿ ಹೇಳಿ ಕಾಲೇಜಿಗೆ ಕಳುಹಿಸುತ್ತಿದ್ದರೂ, ಯುವಕನ ಕಿರುಕುಳ ನಿಂತಿರಲಿಲ್ಲ. ಕಾಲೇಜಿಗೆ ಹೋಗುವಾಗ ಬಸ್ ನಿಲ್ದಾಣದಲ್ಲಿ ಹಿಂಬಾಲಿಸುವುದು, ಬೈಕ್‌ನಲ್ಲಿ ಬರುವಂತೆ ಬಲವಂತಪಡಿಸುವುದು ಮುಂದುವರಿದಿತ್ತು.
ಬ್ಲ್ಯಾಕ್‌ಮೇಲ್ ಎಂಬ ಮಾರಕ ಅಸ್ತ್ರ: “ನಿನ್ನ ವಿಡಿಯೋ ಮತ್ತು ಫೋಟೋಗಳು ನನ್ನ ಬಳಿ ಇವೆ” ಎಂದು ಹೆದರಿಸಿ ಯುವಕ ನಡೆಸುತ್ತಿದ್ದ ಬ್ಲ್ಯಾಕ್‌ಮೇಲ್ ತಂತ್ರವೇ ಈ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ವರ್ಷಪೂರ್ತಿ ಅನುಭವಿಸಿದ ಈ ಮಾನಸಿಕ ಯಾತನೆ ಮತ್ತು ಸಮಾಜದ ಭಯದಿಂದಾಗಿ, ನೊಂದ ಬಾಲಕಿ ಆಗಸ್ಟ್ 18 ರಂದು ಮನೆಯಲ್ಲಿದ್ದ ಕಳೆನಾಶಕ ಸೇವಿಸಿದ್ದಾಳೆ. ಸಾಗರ, ಶಿವಮೊಗ್ಗ ಹಾಗೂ ಮಣಿಪಾಲಿನ ಆಸ್ಪತ್ರೆಗಳಲ್ಲಿ ತೀವ್ರ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಗಸ್ಟ್ 24 ರಂದು ಆಕೆ ಕೊನೆಯುಸಿರೆಳೆದಿದ್ದಾಳೆ. ಹೆತ್ತ ಕರುಳಿನ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಸಾಗರ ಉಪವಿಭಾಗೀಯ ಆಸ್ಪತ್ರೆ ಬಳಿ ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ಮಗಳ ಸಾವಿಗೆ ಕಾರಣರಾದವನ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಗಮನಿಸಿ:POCSO ಕಾಯ್ದೆ 2012, ಸೆಕ್ಷನ್ 23 : ಈ ನಿಯಮದ ಪ್ರಕಾರ ಯಾವುದೇ ಮಾಧ್ಯಮ (ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳು) ಅಥವಾ ವ್ಯಕ್ತಿ ಬಾಲಾಪರಾಧ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವಂತಿಲ್ಲ.ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 72 (ಹಳೆಯ IPC ಸೆಕ್ಷನ್ 228A): ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯಾವುದೇ ವ್ಯಕ್ತಿಯ ಹೆಸರನ್ನು ಅಥವಾ ಅವರ ಗುರುತನ್ನು ಪತ್ತೆಹಚ್ಚಲು ಸಹಾಯ ಮಾಡುವ ಯಾವುದೇ ಮಾಹಿತಿಯನ್ನು ಪ್ರಕಟಿಸುವುದನ್ನು ಇದು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ

Comments
Post a Comment