ಕುಡಿಯುವ ನೀರಿಗೆ 220 ಕೋಟಿ ತಂದಿದ್ದು ಸಾಬೀತು ಪಡಿಸಿದ್ರೆ ಇಂದೇ ರಾಜಕೀಯ ನಿವೃತ್ತಿಯ 'ಓಪನ್ ಚಾಲೆಂಜ್' ಹಾಕಿದ ಹರತಾಳು ಹಾಲಪ್ಪ

ಕುಡಿಯುವ ನೀರಿಗೆ 220 ಕೋಟಿ ತಂದಿದ್ದು ಸಾಬೀತು ಪಡಿಸಿದ್ರೆ ಇಂದೇ ರಾಜಕೀಯ ನಿವೃತ್ತಿಯ 'ಓಪನ್ ಚಾಲೆಂಜ್' ಹಾಕಿದ ಹರತಾಳು ಹಾಲಪ್ಪ

ದಾಖಲೆ ಹಿಡಿದು ಸವಾಲ್ ಹಾಕಿದ ಮಾಜಿ ಆಹಾರ ಸಚಿವ ಹಾಲಪ್ಪ ಹರತಾಳು- ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ 

ಸಾಗರ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಗರ ಹಾಗೂ ಹೊಸನಗರ ಭಾಗಕ್ಕೆ ಜಾರಿಗೆ ತರಲಾದ ಐತಿಹಾಸಿಕ ಕುಡಿಯುವ ನೀರಿನ ಯೋಜನೆಗಳ ಸತ್ಯಾಸತ್ಯತೆಯನ್ನು ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹರತಾಳು ಹಾಲಪ್ಪ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ  ಸಾಗರದ  ಹಕ್ರೆ ಸಮೀಪವಿರುವ  ಗುಬ್ಬುಗೋಡಿವಿನಲ್ಲಿ  ನಡೆದ ಸಂವಾದ ಚರ್ಚೆ ವಿಚಾರ ವಿನಿಮಯ ಮತ್ತು  ‘ಸೇವಾ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕಾಮಗಾರಿ ವೀಕ್ಷಿಸಿದ ಅವರು, ನಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಸ್ಥಳ ಪರಿಶೀಲನೆ ಕೈಗೊಂಡಿರುವುದಾಗಿ ತಿಳಿಸಿದರು. 


ಈ ವೇಳೆ ಮಾತನಾಡಿದ ಅವರು, ಕೇವಲ ಶರಾವತಿ ಸೇತುವೆಯನ್ನಷ್ಟೇ ತೋರಿಸಿಕೊಂಡು ಓಡಾಡುವುದಲ್ಲ, ಸಾಗರ ತಾಲೂಕಿನ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಯೋಜನೆ ಇದಾಗಿದೆ ಎಂದರು. ಬರೋಬ್ಬರಿ 127 ಕೋಟಿ ವೆಚ್ಚದಲ್ಲಿ 13 ಗ್ರಾಮ ಪಂಚಾಯಿತಿಗಳ 337 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಬರೂರು, ಪಡವಗೋಡು, ಮೂಡಳ್ಳಿ ಹಾಗೂ ಮಾಸೂರಿನ ಚಿಕ್ಕನಲ್ಲೂರು ಮುಂತಾದ ಕಟ್ಟಕಡೆಯ ಹಳ್ಳಿಗಳಿಗೂ ಇದರಿಂದ ನೀರು ತಲುಪಲಿದೆ. 2021-22ರಲ್ಲಿ ಮಂಜೂರಾಗಿ ನವೆಂಬರ್ 2022ರಲ್ಲಿ ಗುತ್ತಿಗೆದಾರರಿಗೆ ಆದೇಶ ನೀಡಲಾಗಿದ್ದ ಈ ಕಾಮಗಾರಿ, ಸುಮಾರು 63 ರಿಂದ 64 ಸಾವಿರ ಗ್ರಾಮೀಣ ಜನರಿಗೆ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿದೆ ಎಂದು ಅವರು ವಿವರಿಸಿದರು.

 



ಯೋಜನೆಯ ತಾಂತ್ರಿಕ ಹಿನ್ನೆಲೆ ಕುರಿತು ಮಾಹಿತಿ ಹಂಚಿಕೊಂಡ ಹಾಲಪ್ಪನವರು, ಲಿಂಗನಮಕ್ಕಿ ಜಲಾಶಯದ ಡೆಡ್ ಸ್ಟೋರೇಜ್ ಹಂತದಿಂದ ಸುಮಾರು 770 ಮೀಟರ್ ನೀರನ್ನೆತ್ತಿ (ಲಿಫ್ಟ್ ಮಾಡಿ) ಟ್ಯಾಂಕ್‌ಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಇದಾಗಿದೆ ಎಂದರು. ಬೆಂಗಳೂರು ದಾಟಿ ಯಲಹಂಕಕ್ಕೆ ಹೋದಷ್ಟಾಗುವ ಸುಮಾರು 360 ಕಿಲೋಮೀಟರ್‌ಗಳಷ್ಟು ಉದ್ದದ ಪೈಪ್‌ಲೈನ್ ಅಳವಡಿಸಲಾಗಿದ್ದು, 5 ಸಾವಿರದಿಂದ 50 ಸಾವಿರ ಲೀಟರ್ ಸಾಮರ್ಥ್ಯದ ಬರೋಬ್ಬರಿ 65 ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೆಮ್ಮೆಯಿಂದ ನುಡಿದರು. 



ಇದೇ ಮಾದರಿಯಲ್ಲಿ ಹೊಸನಗರ ಭಾಗದಲ್ಲೂ ಚಕ್ರಾ ಡ್ಯಾಂನಿಂದ ನೀರೆತ್ತಿ ಸುಮಾರು 770 ಕಿ.ಮೀ ಪೈಪ್‌ಲೈನ್ ಮೂಲಕ 670 ಹಳ್ಳಿಗಳಿಗೆ ನೀರೊದಗಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಅವರು ಉಲ್ಲೇಖಿಸಿದರು. 

ಇದೇ ಸಂದರ್ಭದಲ್ಲಿ ವಿರೋಧಿಗಳ ಸುಳ್ಳು ಪ್ರಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಾಲಪ್ಪ, "ನಾವು ಮಾಡಿದ ಕೆಲಸವನ್ನು ನಾವು ಪ್ರಚಾರ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕೆಲವರು ಸಾಗರ ನಗರಕ್ಕೆ ಕುಡಿಯುವ ನೀರಿಗಾಗಿ 220 ಕೋಟಿ ಬಂದಿದೆ ಎಂದು ಕತೆ ಬಿಡುತ್ತಿದ್ದಾರೆ. ಸಾಗರ ನಗರಕ್ಕೆ 220 ಕೋಟಿ ಬಂದಿದೆ ಎಂಬುದನ್ನು ಸಾಬೀತುಪಡಿಸಿದರೆ ನಾನು ಇಂದೇ ರಾಜಕೀಯ ನಿವೃತ್ತಿ ಘೋಷಿಸಲು ಸಿದ್ಧ" ಎಂದು ಬಹಿರಂಗ ಸವಾಲು ಹಾಕಿದರು. ತಾವು ಮಾಡಿದ ಕೆಲಸಗಳ ಅಧಿಕೃತ ದಾಖಲೆಗಳು ಹಾಗೂ ಮಂಜೂರಾತಿ ಆದೇಶ ಪತ್ರಗಳನ್ನು ಪ್ರದರ್ಶಿಸಿದ ಅವರು, ಪಕ್ಷದ ರಾಷ್ಟ್ರೀಯ ಮುಖಂಡರ ಚಿಂತನೆ ಹಾಗೂ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ನಿಷ್ಠೆಯಿಂದ ಮಾಡಬೇಕೆಂದು ಕರೆ ನೀಡಿದರು.

ಗಣೇಶ್,ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ ಯಲಕುಂದ್ಲಿ, ಬಿ. ಟಿ. ರವೀಂದ್ರ ಬಸರಾಣಿ, ಮೇಘರಾಜ್, ರಾಜನಂದಿನಿ, ಅರುಣ ಕುಗ್ವೆ, ಸಂತೋಷ್ ಶೇಟ್, ಸತೀಶ್ ಮೊಗವೀರ, ಮೈತ್ರಿ ಪಾಟೀಲ್, ಬಿ. ಎಚ್. ಲಿಂಗರಾಜು, ಸಾಗರ್ಗ ರ ಹಾಗೂ ಹೊಸನಗರ ಭಾಗದ ಬಿಜೆಪಿ ಪ್ರಮುಖರು ಮತ್ತು ಅಲ್ಲಿನ ಸ್ಥಳೀಯರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ