ಶಿಕ್ಷಕರು ಮಕ್ಕಳಿಗೆ ಸನ್ಮಾರ್ಗದಲ್ಲಿ ಬೋಧನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ-AC ವಿರೇಶ್ ಕುಮಾರ್
ಶಿಕ್ಷಕರು ಮಕ್ಕಳಿಗೆ ಸನ್ಮಾರ್ಗದಲ್ಲಿ ಬೋಧನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ-AC ವಿರೇಶ್ ಕುಮಾರ್
ಸಾಗರ : ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ, ಅದರ ಯಶಸ್ಸಿಗೆ ಕಾರಣವಾಗುವ ಶಿಕ್ಷಕರ ಮೇಲೆ ಹೆಚ್ಚಿನ ನಂಬಿಕೆ ಇರಿಸಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ವೀರೇಶಕುಮಾರ್ ತಿಳಿಸಿದರು.
ಇಲ್ಲಿನ ಈಡಿಗರ ಭವನದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕ ದಿನಾಚರಣೆ ಅಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರು ಮಕ್ಕಳಿಗೆ ಸನ್ಮಾರ್ಗದಲ್ಲಿ ಬೋಧನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಅನೇಕ ಕಾರ್ಯಗಳಿಗೆ ನಿಮ್ಮನ್ನು ತೊಡಗಿಸಿ ಕೊಳ್ಳುವುದರ ಹಿಂದೆ ನಿಮ್ಮ ನಿಸ್ವಾರ್ಥ ಮತ್ತು ಪ್ರಾಮಾಣಿಕತೆ ಅಡಗಿರುತ್ತದೆ. ತಾಲ್ಲೂಕಿನಲ್ಲಿ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದು ಮಕ್ಕಳ ಏಳಿಗೆಗೆ ಅವಿರತ ಶ್ರಮಿಸುತ್ತಿರುವುದು ಅಭಿನಂದಾರ್ಹ ಸಂಗತಿ ಎಂದರು.
ತಹಶೀಲ್ದಾರ್ ಡಾ. ಪ್ರತಿಭಾ ಆರ್. ಮಾತನಾಡಿ ಮಕ್ಕಳನ್ನು ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನ ಕಡೆ ಕರೆದೊಯ್ಯುವ ಶಿಕ್ಷಕ ಸಮೂಹ ಯಾವತ್ತೂ ಪೂಜ್ಯ ಸ್ಥಾನದಲ್ಲಿರುತ್ತಾರೆ. ಎಷ್ಟೇ ಆಧುನಿಕತೆ ಬಂದರೂ ಶಿಕ್ಷಕರು ನೀಡುತ್ತಿರುವ ಸೇವೆಗೆ ಅವುಗಳು ಯಾವತ್ತೂ ಪರ್ಯಾಯವಾಗಲು ಸಾಧ್ಯವಿಲ್ಲ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ನಾನು ಶಿಕ್ಷಕ ಎನ್ನುವ ಹೆಮ್ಮೆ ಸದಾ ಇರುತ್ತದೆ. ಒತ್ತಡದ ನಡುವೆಯೂ ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸಾಂಸ್ಕೃತಿಕ, ಅರ್ಥಪೂರ್ಣ ಬದುಕು ಕಟ್ಟಿಕೊಡಲು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಣದ ಮೂಲಕ ಮಕ್ಕಳಿಗೆ ಹಾಕುವ ಅಡಿಪಾಯ ಮುಖ್ಯವಾಗಿರುತ್ತದೆ. ಅನೇಕ ಶಿಕ್ಷಕರು ನಿವೃತ್ತರಾಗುತ್ತಿದ್ದು ಸರ್ಕಾರ ಹೊಸ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಂಡಿದೆ. ನಿವೃತ್ತರಾದ ಶಿಕ್ಷಕರು ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳದೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು. ಇದೇಸಂದರ್ಭದಲ್ಲಿ ನಿವೃತ್ತ ಶಿಕ್ಷಕರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರು, ಶೇ. 100 ಫಲಿತಾಂಶ ಪಡೆದ ಶಾಲೆಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಪ್ರಮುಖರಾದ ಓಂಕಾರಪ್ಪ, ಲಕ್ಷö್ಮಣ ನಾಯ್ಕ್, ಸುಬ್ರಹ್ಮಣ್ಯ, ವಿಕ್ಟೋರಿಯಾ ಫರ್ನಾಂಡಿಸ್, ವಿ.ಟಿ.ಸ್ವಾಮಿ, ಡಾ. ಅನ್ನಪೂರ್ಣ, ಪಾಲಾಕ್ಷಪ್ಪ ಎಸ್.ಎನ್. ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು -77204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment