ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ
ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ
ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗವು ಶೀಘ್ರದಲ್ಲಿಯೇ ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳ ಜತೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ ಸುಮಾರು 5,950 ಗ್ರಾಮ ಪಂಚಾಯಿತಿಗಳಿವೆ. ಹಿಂದಿನ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳು ಡಿಸೆಂಬರ್ 2020 ರಲ್ಲಿ ಎರಡು ಹಂತಗಳಲ್ಲಿ ನಡೆದಿದ್ದವು. ಗ್ರಾಮ ಪಂಚಾಯಿತಿಗಳ ಅವಧಿ 5 ವರ್ಷಗಳಾಗಿದೆ. ಬಹುತೇಕ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯವಾಗಿದೆ. ಜತೆಗೆ ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಯು ಹಲವು ವರ್ಷಗಳಿಂದ ಬಾಕಿ ಇದೆ. ಹೊಸದಾಗಿ ಚುನಾವಣೆ ನಡೆಸಲು ಅಗತ್ಯವಿದ್ದ ಮೀಸಲಾತಿ ಹಂಚಿಕೆ ಹಾಗೂ ವಾರ್ಡ್ ಮರುವಿಂಗಡಣೆಯನ್ನು ಸರ್ಕಾರ ಪೂರ್ಣಗೊಳಿಸಿದೆ. ಈ ಬೆನ್ನಲ್ಲೆ ಚುನಾವಣೆ ಆಯೋಗವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದೆ.
ಆಯೋಗದಿಂದ ಮಹತ್ವದ ಸುತ್ತೋಲೆ
ರಾಜ್ಯ ಚುನಾವಣಾ ಆಯೋಗವು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಈ ಕುರಿತು ಅಧಿಕಾರಿಗಳ ಸಭೆ ಕರೆದು ಸುತ್ತೋಲೆ/ಸೂಚನಾ ಪತ್ರ ಹೊರಡಿಸಿದೆ. ಆಯೋಗದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 29 ರಂದು ಮಹತ್ವದ ವಿಡಿಯೋ ಸಂವಾದ ಸಭೆಯನ್ನು ನಿಗದಿಪಡಿಸಲಾಗಿದೆ. ಬೆಳಗಾವಿ ವಿಭಾಗ, ಕಲಬುರಗಿ ವಿಭಾಗದ ಎಲ್ಲಾ ಅಪರ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು. ತಹಶೀಲ್ದಾರರು ಆಯಾ ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಭೆಯಲ್ಲಿ ಚರ್ಚಿಸಲಿರುವ ಪ್ರಮುಖ ವಿಷಯಗಳು ಏನು?
ಚುನಾವಣಾ ಆಯೋಗವು ಮುಖ್ಯವಾಗಿ ಮತಗಟ್ಟೆಗಳು ಹಾಗೂ ಮತಪೆಟ್ಟಿಗೆಗಳ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಿದೆ.
ಮತಪೆಟ್ಟಿಗೆಗಳ ಸಮಗ್ರ ಮಾಹಿತಿ: ಆಯೋಗವು ಈಗಾಗಲೇ ಕೋರಿರುವ ನಮೂನೆ 1 ರಿಂದ 4 ರ ಪ್ರಕಾರ ಮತಪೆಟ್ಟಿಗೆಗಳ ವಿವರಗಳನ್ನು ಒದಗಿಸುವುದು.
ಮತಗಟ್ಟೆಗಳ ವಿವರ :
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರಸ್ತುತ ಮತಗಟ್ಟೆಗಳ ನಿಖರ ಮಾಹಿತಿ ಪರಿಶೀಲನೆ.
ಅಗತ್ಯವಿರುವ ಒಟ್ಟು ಮತಪೆಟ್ಟಿಗೆಗಳು: ಸಾರ್ವತ್ರಿಕ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾವಾರು ಬೇಕಾಗುವ ಒಟ್ಟು ಮತಪೆಟ್ಟಿಗೆಗಳ ಲೆಕ್ಕಾಚಾರ.
ಕೊರತೆಯಿರುವ ಮತಪೆಟ್ಟಿಗೆಗಳು: ಪ್ರಸ್ತುತ ದಾಸ್ತಾನಿನಲ್ಲಿರುವ ಮತಪೆಟ್ಟಿಗೆಗಳ ಹೊರತಾಗಿ ಇನ್ನೂ ಎಷ್ಟು ಬಾಕ್ಸ್‌ಗಳ ಕೊರತೆ ಇದೆ ಎಂಬುದನ್ನು ಗುರುತಿಸುವುದು.
ಮತಪೆಟ್ಟಿಗೆಗಳ ದುರಸ್ತಿ: ಹಾಳಾಗಿರುವ ಅಥವಾ ರಿಪೇರಿ ಮಾಡಬೇಕಾಗಿರುವ ಮತಪೆಟ್ಟಿಗೆಗಳನ್ನು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳು.
ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಕಾಂಗ್ರೆಸ್ ಕರೆ
ವರ್ಷಾಂತ್ಯದ ವೇಳೆಗೆ ನಡೆಯಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ಈಗಿನಿಂದಲೇ ಚುನಾವಣೆಗೆ ಸಜ್ಜಾಗುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 1 ಕೋಟಿ ರೂ. ಅನುದಾನ ನೀಡುವುದಾಗಿ ಸಭೆಯಲ್ಲಿ ಭರವಸೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಸಂಭಾವ್ಯ ದಿನಾಂಕ ಯಾವಾಗ?
ಸಿದ್ಧತೆ ಪರಿಶೀಲನೆ ನಡೆಸುತ್ತಿರುವ ಚುನಾವಣಾ ಆಯೋಗವು ಅಕ್ಟೋಬರ್ ಎರಡನೇ ವಾರದಲ್ಲಿ ಗ್ರಾಮ ಪಂಚಾಯತಿ ಅಥವಾ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣಾ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಡಿಸೆಂಬರ್ 2 ಅಥವಾ 3ನೇ ವಾರ ಚುನಾವಣೆ ನಡೆಸುವ ಸಾಧ್ಯತೆ ಇದೆ.
Courtesy : webnews
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment