'ವಿಬಿ ಜಿ ರಾಮ್ ಜಿ’ಯಡಿ ವಸತಿ ಯೋಜನೆಗೂ ಅವಕಾಶ: ಸಚಿವ ಈಶ್ವರ ಖಂಡ್ರೆ

'ವಿಬಿ ಜಿ ರಾಮ್ ಜಿ’ಯಡಿ ವಸತಿ ಯೋಜನೆಗೂ ಅವಕಾಶ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬದಲಾದ ರೂಪ ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ರಾಜ್ಯದ ವಸತಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದ್ದು, ರಾಜ್ಯದ ಶಿಫಾರಸಿಗೆ ಮನ್ನಣೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಇಂತಹ ಹಿಂದುಳಿದ ವರ್ಗದ ಬಡವರಿಗೆ ಸಮರ್ಪಿತವಾದ ಬಸವ ವಸತಿ ಯೋಜನೆ, ಅಲೆಮಾರಿ-ಅರೆ ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಿಸಲು ನೆರವಾಗುವ ದೇವರಾಜ ಅರಸು ವಸತಿ ಯೋಜನೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗ್ರಾಮೀಣ ಜನರಿಗೆ ವಸತಿ ಕಲ್ಪಿಸುವ ಡಾ.ಅಂಬೇಡ್ಕರ್ ನಿವಾಸ ಯೋಜನೆಯಡಿ ಮನೆ ನಿರ್ಮಿಸಲೂ ಈಗ ವಿಬಿಜಿ ರಾಮ್ ಜಿಯಲ್ಲಿ ಅವಕಾಶವಿದೆ ಎಂದು ಹೇಳಿದರು.

ಕೇಂದ್ರ ಸರಕಾರ ವಿಬಿಜಿ ರಾಮ್ ಜಿಯಡಿ ಅನುಮೋದಿಸಿದ್ದ 318 ಕಾಮಗಾರಿಗಳ ಸಂಖ್ಯೆಯನ್ನು ಈಗ 375ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಸರಕಾರ ಶಿಫಾರಸು ಮಾಡಿದ್ದ ವಸತಿ ಯೋಜನೆ, ಸಮುದಾಯ ಕುಶಲಕರ್ಮಿಗಳ ಕೇಂದ್ರ ನಿರ್ಮಾಣ, ವೈಯಕ್ತಿಕ ಕಾಮಗಾರಿಯಡಿ ರೇಶ್ಮೆ ಹುಳು ಸಾಕಾಣಿಕೆ ಮನೆ (ಘಟಕ)ಹಾಗೂ ಒಂದೇ ಭೂಮಿಯಲ್ಲಿ ಮರಗಳು, ಹುಲ್ಲುಗಾವಲು(ಮೇವು) ಮತ್ತು ಜಾನುವಾರು ಸಾಕಣೆಯನ್ನು ಸಂಯೋಜಿಸಿ ಬೆಳೆಸುವ ಸಿಲ್ವಿ ಪ್ಯಾಷ್ಚರ್ ಸೇರಿದೆ ಎಂದು ಹೇಳಿದರು.

ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಗ್ರಾಮೀಣ ಜನರಿಗೆ ಸ್ಪಷ್ಟ ಮಾಹಿತಿ ನೀಡಿ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಹೆಚ್ಚಿನ ಮಾನವ ದಿನ ಸೃಜಿಸುವಂತೆ ಮತ್ತು ಯಾವುದೇ ಗ್ರಾಮೀಣ ಬಡ ಜನರು ಉದ್ಯೋಗ ಸಿಗದೆ ಗುಳೆ ಅಥವಾ ವಲಸೆ ಹೋಗದಂತೆ ತಡೆಯಲು ಕ್ರಮ ವಹಿಸುವಂತೆ ತಿಳಿಸಿದರು.

ನಿಯಮ ತಿದ್ದುಪಡಿ: ಅ.2ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿ, ನವೆಂಬರ್ ತಿಂಗಳಲ್ಲಿ 10ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ನಿಯಮಾನುಸಾರ ಇ-ಸ್ವತ್ತು ನೀಡಲು ಮತ್ತು ಅಭಿಯಾನ ನಡೆಸಲು ಅನುವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತೆರಿಗೆ ಮತ್ತು ಶುಲ್ಕಗಳು) ನಿಯಮ 2025ಕ್ಕೆ ಅಗತ್ಯ ಮತ್ತು ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಈಶ್ವರ ಖಂಡ್ರೆ ಸೂಚನೆ ನೀಡಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಇ-ಸ್ವತ್ತು ನಿರ್ದೇಶಕ ಗಿರೀಶ್ ಬದೋಲೆ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ