ರಾಮಕೃಷ್ಣ ಹೆಗಡೆ : ರಾಜಕೀಯವಾಗಿ ಸೋತು ಐತಿಹಾಸಿಕವಾಗಿ ಗೆದ್ದ ದೂರಗಾಮಿ ನಾಯಕ

ರಾಮಕೃಷ್ಣ ಹೆಗಡೆ : ರಾಜಕೀಯವಾಗಿ ಸೋತು ಐತಿಹಾಸಿಕವಾಗಿ ಗೆದ್ದ ದೂರಗಾಮಿ ನಾಯಕ


ಇದು ಹೆಗಡೆಯವರ ಜನ್ಮಶತಮಾನೋತ್ಸವದ ವರ್ಷ. ನಿನ್ನೆ ವಿಧಾನಸೌಧದ ಸಭಾಂಗಣದಲ್ಲಿ ಜನ್ಮ ಶತಮಾನೋತ್ಸವವು ಅರ್ಥಪೂರ್ಣವಾಗಿ ನಡೆಯಿತು. ಹೆಗಡೆಯವರ ನೂರರ ನೆನಪುಗಳು ಎಡ, ಬಲ ಮತ್ತು ಮಧ್ಯವರ್ತಿ ರಾಜಕೀಯದ ನಾಯಕರುಗಳನ್ನು ಒಂದೇ ವೇದಿಕೆಯಲ್ಲಿ ತಂದಿದ್ದವು!  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪರಾಷ್ಟ್ರಪತಿ, ಮಾಜಿ ಉಪ ರಾಷ್ಟ್ರಪತಿ, ಮುಖ್ಯ ಮಂತ್ರಿ, ಮಾಜಿ ಮುಖ್ಯ ಮಂತ್ರಿ, ಕೇಂದ್ರ ಸಚಿವ ಹೀಗೆ ಎಲ್ಲರೂ ತಮ್ಮ ಭಾಷಣದಲ್ಲಿ ಹೆಗಡೆಯವರನ್ನು ಹೊಗಳಿದರು. ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಅವರು ಹೆಗಡೆಯವರ ಸ್ಮರಣಾರ್ಥ ರಾಜ್ಯ ಪ್ರಶಸ್ತಿ, ಕಾರವಾರದ ವೈದ್ಯಕೀಯ ವಿದ್ಯಾಲಯ ಮತ್ತು ಬೆಂಗಳೂರಿನ ರಸ್ತೆ ಒಂದಕ್ಕೆ ಅವರು ಹೆಸರು ನಾಮಕರಣ ಮಾಡುವುದಾಗಿ ಘೋಷಿಸುವ ಮೂಲಕ ತಮ್ಮ ರಾಜಕೀಯ ಮುತ್ಸದ್ಧಿತನ ಮೆರೆದರು. 


ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಗಡೆಯವರ ಕುರಿತು ಕೆಲವು ಲೇಖನಗಳು ಬಂದಿವೆ. ಖ್ಯಾತ ಪತ್ರಕರ್ತ ದಿನೇಶ ಅಮ್ಮಿನಮಟ್ಟು ಅವರು ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿ ಅವರು 1984 ರಲ್ಲಿ ಹೆಗಡೆ ಅವರ ಕುರಿತು ಬರೆದಿದ್ದ ಲೇಖನವನ್ನು ಹಂಚಿಕೊಂಡಿದ್ದಾರೆ. ಬಹುತೇಕ ಲೇಖನಗಳಲ್ಲಿ 1983ರ ಕರ್ನಾಟಕ ಜನತಾರಂಗದ ಘಟನೆಗಳನ್ನು  ನೆನಪಿಸಿಕೊಂಡು ಹೆಗಡೆಯವರನ್ನು ಟೀಕಿಸಲಾಗಿದೆ. ಒಬ್ಬರಂತೂ ಹೆಗಡೆಯವರನ್ನು ಗೆದ್ದಲುಗಳು ಕಟ್ಟಿದ ಗೂಡಿಗೆ ಸೇರಿಕೊಂಡ ಹಾವಿಗೆ ಹೋಲಿಸಿದ್ದಾರೆ! 1983ರ ಚುನಾವಣೆಯ ಶ್ರೇಯಸ್ಸು ಬಂಗಾರಪ್ಪ, ದೇವೇಗೌಡ, ಬೊಮ್ಮಾಯಿ, ಪಟೇಲ , ನಜೀರಸಾಬ  ಅವರಿಗೆ ಸಲ್ಲಬೇಕು. ದೇವರಾಜ ಅರಸು ಅವರು ಆಗಲೇ ನಿಧನರಾಗಿದ್ದರೂ ಕೂಡ ಅವರು ಕಟ್ಟಿದ್ದ ಕರ್ನಾಟಕ ಕ್ರಾಂತಿ ರಂಗ ಮತ್ತು ಅವರ ಸುಧಾರಣೆಗಳು ಅವರ ಅನುಪಸ್ಥಿತಿಯಲ್ಲಿಯೂ ಕೆಲಸ ಮಾಡಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಗುಂಡೂರಾವ ಅವರ ಸರಕಾರದ ಅತಿರೇಕಗಳು ಕರ್ನಾಟಕದಲ್ಲಿ ಕಾಂಗ್ರೆಸ ವಿರೋಧಿ ಭೂಮಿಕೆಯನ್ನು ಹುಟ್ಟು ಹಾಕಿದ್ದವು. ಈ ಎಲ್ಲವುಗಳ ಪರಿಣಾಮ ಮತ್ತು ಫಲವೇ ಜನತಾಪಕ್ಷ ನೇತೃತ್ವದ ಸರ್ಕಾರವಾಗಿತ್ತು. ಆದರೆ, ರಾಜಕೀಯ ವಿಮರ್ಶಕರು ಹೇಳುವಂತೆ ಉತ್ತು, ಬಿತ್ತಿ, ಬೆಳೆಯದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗುವ ಮೂಲಕ ಫಲ ಅನುಭವಿಸಿದ್ದರು! ಅದು ನಿಜವೂ ಹೌದು.

ಆದರೆ, ಅನಾಯಾಸವಾಗಿ ಮುಖ್ಯ ಮಂತ್ರಿಯಾದ ಘಟನೆಯನ್ನು ಅಥವಾ ಅವರ ಯಾವುದೋ ವೈಯಕ್ತಿಕ ದೌರ್ಬಲ್ಯವನ್ನು  ಮಾತ್ರ  ಮುಂದಿಟ್ಟುಕೊಂಡು ಹೆಗಡೆಯವರ ವ್ಯಕ್ತಿತ್ವ, ಸಾಧನೆ ಮತ್ತು ಕೊಡುಗೆಯನ್ನು ಅಳೆಯುವುದು ಅವರ ಒಟ್ಟಾರೆ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಾಗುತ್ತದೆ. ರಾಮಕ್ರಷ್ಣ  ಹೆಗಡೆಯವರು 1983ರ ಚುನಾವಣೆಯಲ್ಲಿ ಕಾಣಿಸಿಕೊಳ್ಳದಿದ್ದರೂ ಅವರು ಆ ಸಂದರ್ಭದ ಅನಿವಾರ್ಯ ಆಯ್ಕೆಯಾಗಿದ್ದರು ಎಂಬುದನ್ನು ಬಹುತೇಕ ವಿಮರ್ಶಕರು ಗಮನಿಸುವುದಿಲ್ಲ. ಜನತಾ ರಂಗವು ದೊಡ್ಡ ಒಕ್ಕೂಟವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಬಿಜೆಪಿ, ಎಡಪಕ್ಷಗಳು ಮತ್ತು ಪಕ್ಷೇತರರ ಬೆಂಬಲ ಅನಿವಾರ್ಯ ಆಗಿತ್ತು. ಆಗ ಹೆಗಡೆ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರ ಮಟ್ಟದಲ್ಲಿ ಸಂಪರ್ಕಗಳನ್ನು ಹೊಂದಿದ್ದರು. ಬಿಜೆಪಿ ಮತ್ತು ಎಡ ಪಕ್ಷಗಳು ಅವರನ್ನು ಬೆಂಬಲಿಸಲು ಒಲವು ತೋರಿದ್ದವು. ಅವರಿಗೆ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ ಅವರ ಬೆಂಬಲವೂ ಇತ್ತು. ಮೇಲಾಗಿ ಆಗಲೇ ಮೂರು ಬಾರಿ ಶಾಸಕರಾಗಿ  ಮತ್ತು ನಿಜಲಿಂಗಪ್ಪನವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವವೂ ಇತ್ತು. ಆಗ ಈ ಅನುಕೂಲತೆಗಳು ಮತ್ತು ಅರ್ಹತೆಗಳು ಜನತಾ ರಂಗದ ಇತರ ಯಾವ ನಾಯಕರಿಗೂ ಇರಲಿಲ್ಲವೆಂಬುದು ಗಮನಿಸಬೇಕು. ಹೆಗಡೆಯವರು ತಮ್ಮ ಮೊದಲ ಅವಧಿ ( 1983-1984) ಯಲ್ಲಿ ತಮ್ಮ ಅಲ್ಪಸಂಖ್ಯಾತ ಸರ್ಕಾರವನ್ನು ಯಶಸ್ವಿಯಾಗಿ ನಿರ್ವಹಿಸಿರುವ ವಾಸ್ತವ ಸತ್ಯವೇ ಅವರ ಆಯ್ಕೆಯನ್ನು ಸಮರ್ಥಿಸುತ್ತದೆ. 

ಆದರೆ, ಇಂದು ಕರ್ನಾಟಕವು ಹೆಗಡೆಯವರನ್ನು ಮಾಜಿ ಮುಖ್ಯ ಮಂತ್ರಿ  ಎಂದು ಮಾತ್ರ ನೆನೆಯುತ್ತಿಲ್ಲ. ಅವರು ಕರ್ನಾಟಕದಲ್ಲಿ ಕಾಂಗ್ರೇಸ್ಸೇತರ ರಾಜಕೀಯ,  ಸರ್ಕಾರ ಮತ್ತು ಜನತಾ ಚಳುವಳಿಯ ಪ್ರವರ್ತಕರೂ ಹೌದು. ಹೆಗಡೆ ಅವರು 1983ರಲ್ಲಿ ಜನತಾಪಕ್ಷದ ಗೆಲುವಿಗೆ ದುಡಿಯದಿದ್ದರೂ ಕೂಡ ಜನತಾ ಪಕ್ಷದ ಸರ್ಕಾರಕ್ಕೆ ಭದ್ರ ಬುನಾದಿ ಹಾಕಿದ್ದರು. 1984ರ ಲೋಕಸಭೆ ಚುನಾವಣೆಯ  ಹೀನಾಯ ಸೋಲನ್ನು ಒಪ್ಪಿಕೊಂಡು ನೈತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ ಹೆಗಡೆಯವರ ಧೈರ್ಯವನ್ನು ಮೆಚ್ಚಲೇಬೇಕು.1985ರ ಮಾರ್ಚನಲ್ಲಿ ನಡೆದ ಚುನಾವಣೆಯಲ್ಲಿ 

ಹೆಗಡೆಯವರು ತಮ್ಮ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸುತ್ತಾರೆ  ಎಂದು ರಾಜಕೀಯ ವಿಶ್ಲೇಷಕರು ನಂಬಿರಲಿಲ್ಲ. ಆದರೆ ಹೆಗಡೆ ನೇತೃತ್ವದ ಜನತಾ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆ ಕೆಳಗೆ  ಮಾಡಿತ್ತು! ಆ ಗೆಲುವು ಅವರನ್ನು ರಾಷ್ಟ್ರಮಟ್ಟದ ನಾಯಕರನ್ನಾಗಿ  ಬಿಂಬಿಸಿತ್ತು. ಯಾಕೆಂದರೆ ರಾಜೀವ ಗಾಂಧಿಯವರ ಪ್ರಭಾವವು ಉಚ್ಛ್ರಾಯಯವಾಗಿದ್ದ ಮತ್ತು ಇಂದಿರಾ ಗಾಂಧಿಯವರ ಹತ್ಯೆಯ  ನೆನಪುಗಳು ಇನ್ನೂ ಹಸಿಯಾಗಿದ್ದ ಆ ಕಾಲದಲ್ಲಿ ಕಾಂಗ್ರೇಸ್ಸೇತರ ಪಕ್ಷವೊಂದು ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿತ್ತು. ಆದರೆ, ಹೆಗಡೆಯವರು ಆ ಮಾತನ್ನು ಸುಳ್ಳಾಗಿಸುವ ಮೂಲಕ ಕಾಂಗ್ರೆಸ ಪಕ್ಷಕ್ಕೆ ಪರ್ಯಾಯವಾಗಿ ಜನತಾ ಚಳುವಳಿಗೆ ಶಕ್ತಿ ತುಂಬಿದ್ದರು. ಈ ಸಾಧನೆಯು ಹೆಗಡೆಯವರಿಗೆ ದೇಶದ ರಾಜಕೀಯದಲ್ಲಿ ಐತಿಹಾಸಿಕ ಸ್ಥಾನವನ್ನು ಕಲ್ಪಿಸಿ ಕೊಡುತ್ತದೆ.

ಆದರೆ, ಹೆಗಡೆಯವರನ್ನು ಕೇವಲ ಅವರ ರಾಜಕೀಯ ಸಾಧನೆ ಇಂದ ಮಾತ್ರ ನೆನೆಯಲಾಗದು. ಹೆಗಡೆಯವರು ದೇಶದ ಪಾರಂಪರಿಕ ರಾಜಕೀಯ ಚೌಕಟ್ಟು ಮೀರಿ ಹೊಸ ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಿದ ಕಾರಣಕ್ಕಾಗಿ  ದೇಶದ ಆಡಳಿತ, ರಾಜಕೀಯ ಮತ್ತು ಸ್ಥಳೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಇದು ಐತಿಹಾಸಿಕ ಸ್ಥಾನವೂ ಹೌದು. ಅದುವರೆಗೂ ಕರ್ನಾಟಕದ ವಿಧಾನಸಭೆ ಮತ್ತು ಜಿಲ್ಲೆಯ ಕಲೆಕ್ಟರ್  ಕಚೇರಿಗಳಿಗೆ ಸೀಮೀತವಾಗಿದ್ದ ರಾಜಕೀಯ ಅಧಿಕಾರವನ್ನು ಹೆಗಡೆ ಅವರು ದಲಿತರ ಕೇರಿಗೆ, ಕುರುಬರ ಹಟ್ಟಿಗೆ, ಒಡ್ಡರ ಓಣಿಗೆ, ಸೋಲಿಗರ ಹಾಡಿಗೆ ಹರಿದು ಬರುವಂತೆ ಮಾಡಿದ್ದರು.ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ರಾಜೀವ ಗಾಂಧಿ ಅವರೇ ಹೆಗಡೆ ಅವರ ಕ್ರಾಂತಿಕಾರಿ ಕ್ರಮವನ್ನು ಸ್ತುತಿಸಿದುದ ಕುರಿತು ತಮ್ಮ ಭಾಷಣದಲ್ಲಿ ಹೇಳಿದರು. ಹೆಗಡೆ ಅವರ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯು ತಳಮಟ್ಟದಲ್ಲಿ ಹೊಸ ನಾಯಕತ್ವವನ್ನು ಸ್ರಷ್ಟಿ ಮಾಡುವುದಾಗಿ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಹೇಳಿದ್ದರಂತೆ. ರಾಜೀವ ಗಾಂಧಿಯವರು ಹೆಗಡೆ ಅವರ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯನ್ನು ಮಾದರಿಯಾಗಿ ಇಟ್ಟುಕೊಂಡು ಸಂವಿಧಾನಿಕ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ವಹಿಸಿದ್ದರು ಎಂಬುದು ಗಮನಾರ್ಹ. ನಮ್ಮ ಮುಖ್ಯ ಮಂತ್ರಿ ಶಿವಕುಮಾರ ಅವರೂ ಒಂದು ಕಾಲಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು!

ಗಾಂಧೀಜಿ ಅವರು ರಾಜಕೀಯದಲ್ಲಿ ಧರ್ಮವನ್ನು ತರಲು ಬಯಸಿದ್ದರು ( ಇಲ್ಲಿ ಧರ್ಮವೆಂದರೆ ಮಾನವೀಯ ಮೌಲ್ಯಗಳು).

ಹಾಗೆಯೇ ಹೆಗಡೆಯವರು ರಾಜಕೀಯದಲ್ಲಿ ನೈತಿಕ ಮೌಲ್ಯಗಳನ್ನು ತರಲು ಪ್ರಯತ್ನಿಸಿದರು. ಆ ದಿನಗಳಲ್ಲಿ ಅವರ ಮೌಲ್ಯಾಧಾರಿತ ರಾಜಕೀಯವು ದೇಶಾದ್ಯಂತ ಸುದ್ದಿಯಾಗಿತ್ತು. ಅವರು ರಾಜಕೀಯದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ತರಲು ಪ್ರಯತ್ನಿಸಿದರು. ಆ ದಿಶೆಯಲ್ಲಿ ಅವರು ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮದೇ  ಸರ್ಕಾರದ ಮಂತ್ರಿಗಳ ವಿರುದ್ಧವೂ ಲೋಕಾಯುಕ್ತವು  ಕ್ರಮ ಜರುಗಿಸಿದಾಗ ಅವರು ಅದು ತಮ್ಮ ಸರ್ಕಾರದ ಮೇಲೆ ನಡೆದ ದಾಳಿ ಎಂದು ತಿಳಿಯಲಿಲ್ಲ. 


ಆದರೆ, ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಹೆಗಡೆ ಅವರು ಬಾಟಲಿಂಗ್ ಹಗರಣ, ರೇವಜೀತು ಹಗರಣ ಮತ್ತು ಟೆಲಿಫೋನ್ ಟ್ಯಾಪಿಂಗ್ ಹಗರಣಗಳನ್ನು ಎದುರಿಸಬೇಕಾಯಿತು. ಅವರ ಮಗ ಭರತ ಹೆಗಡೆ ಅವರ ಮೇಲೆ ವೈದ್ಯಕೀಯ ಸೀಟು ಕೊಡಿಸಲು ಹಣ ಪಡೆದ ಆರೋಪವನ್ನು ಮಾಡಲಾಗಿತ್ತು. ಆದರೆ, ಹೆಗಡೆಯವರು ಎಲ್ಲ ಹಗರಣಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವ ಮೂಲಕ ತಾವು ನುಡಿದಂತೆ ನಡೆದಿದ್ದರು. ಅವರು ' No political office is above the law ' ಎಂದು ತೋರಿಸಿದ್ದರು.

ಹೆಗಡೆ ಅವರ ಲೋಕ ಶಕ್ತಿಯ ದಿನಗಳಲ್ಲಿ ಅವರಿಗೆ ಆಪ್ತರಾಗಿದ್ದ ಮಂಡ್ಯದ ವೆಂಕಟೇಶ ಅವರು ಹೇಳುವಂತೆ ಹೆಗಡೆ ಅವರು ತಮ್ಮ ಮಗನ ಮೇಲೆ ಲಂಚದ ಆರೋಪ ಬಂದಾಗ ಭರತ ಅವರನ್ನು ಬೆಲ್ಟನಿಂದ ಹೊಡೆದು ಮನೆಯಿಂದ ಹೊರಗೆ ಹಾಕಿದ್ದರಂತೆ! ಭರತ ಹೆಗಡೆ ಅವರ ಮೇಲೆ ಎರಡು ಲಕ್ಷ ರೂಪಾಯಿ ಪಡೆದಿದ್ದಾರೆ ಎಂಬ ಆರೋಪವಿತ್ತು. ಅದು ಸಣ್ಣ ಮೊತ್ತವಾದರೂ ಹೆಗಡೆಯವರು ಮಗನನ್ನು ಮನೆಯಿಂದ ಹೊರಗಿಡಲು ಹಿಂಜರಿಯಲಿಲ್ಲ ಎಂಬುದನ್ನು ಗಮನಿಸಬೇಕು.ಅವರು ಮುಖ್ಯ ಮಂತ್ರಿಗಳಾಗಿದ್ದಾಗ ಅವರ ಮಗಳು ಮಮತಾ ನಿಚ್ಚಾನಿಯವರ ನಿತ್ಯ ಸ್ಕೂಟರ ಮೇಲೆ ವಿಧಾನಸೌಧಕ್ಕೆ ಊಟ ತೆಗೆದುಕೊಂಡು ಬರುತ್ತಿದ್ದರಂತೆ! ಹೆಗಡೆ ಅವರು ಮಗಳನ್ನು ಸರ್ಕಾರಿ ವಾಹನ ಬಳಸಲು ಬಿಟ್ಟಿರಲಿಲ್ಲ. 1988 ರಲ್ಲಿ ಟೆಲಿಫೋನ್ ಟ್ಯಾಪಿಂಗ್ ಹಗರಣ ದೇಶಾದ್ಯಂತ ಸುದ್ದಿ ಆಗುತ್ತಲೇ ಹೆಗಡೆಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಇಂದು ಎಷ್ಟು ಜನ ರಾಜಕಾರಣಿಗಳಲ್ಲಿ ಈ ನೈತಿಕ ಪ್ರಜ್ಞೆ ಇದೆ ?!

ಹೆಗಡೆ ಅವರು ದೇಶದಲ್ಲಿ ಕಾಂಗ್ರೆಸ ಪ್ರಧಾನ, ಪ್ರಭಾವಿ ಮತ್ತು ಪ್ರಾಬಲ್ಯದ ರಾಜಕೀಯ ವ್ಯವಸ್ಥೆಯನ್ನು ನೋಡಿ ರಾಜ್ಯ ಸರ್ಕಾರಗಳಿಗೆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಸ್ವಾಯತ್ತತೆಯನ್ನು ಕೊಡಬೇಕೆಂದು ಬಲವಾಗಿ ಪ್ರತಿಪಾದಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದುದು ಅವರ ಸಾಧನೆಯಾಗಿದೆ. ಇಂದು ಮೋದಿ -ಶಾ ಅವರ ಕಪಿ ಮುಷ್ಟಿಯ ರಾಜಕೀಯ ಶೈಲಿಯನ್ನು ನೋಡಿದರೆ ಹೆಗಡೆಯವರ ಪರಿಣಾಮಕಾರಿ ಒಕ್ಕೂಟ ವ್ಯವಸ್ಥೆಯ ಪ್ರತಿಪಾದನೆ ಹೆಚ್ಚು ಪ್ರಸ್ತುತ ಆಗುತ್ತದೆ. 

ಹೆಗಡೆಯವರ ಬಹುತೇಕ ಟೀಕಾಕಾರರು ಅವರ ಉದಾರ ಮತ್ತು ಪ್ರಗತಿಪರ ವ್ಯಕ್ತಿತ್ವವನ್ನು ನಿರ್ಲಕ್ಷಿಸುತ್ತಾರೆ. ಬಹುಶಃ ಅವರ ಬ್ರಾಹ್ಮಣ್ಯ ವಿರೋಧಿ ನಿಲುವು ಅವರ ಹೆಗಡೆ ವಿರೋಧಿ ನಿಲುವಿಗೆ ಕಾರಣವಾಗಿರಲು ಸಾಕು! ಆದರೆ, ರಾಮಕೃಷ್ಣ ಹೆಗಡೆ ' ಬ್ರಾಹ್ಮಣ್ಯ' ವನ್ನು ಮೀರಿದ ಬ್ರಾಹ್ಮಣರಾಗಿದ್ದರು ಎಂಬುದನ್ನು ಗುರುತಿಸುವಲ್ಲಿ ನಾವು ವಿಫಲರಾಗಿದ್ದೇವೆ. ಹೆಗಡೆ ಅವರ ' ದೊಡ್ಡ ಮನೆ ' ಗಾಂಧಿ ಮನೆತನವಾಗಿತ್ತು! ಅವರ ಹಿರಿಯರು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದರು. ಹೆಗಡೆಯವರ ಅಕ್ಕ ಮಹಾದೇವಿ ಅವರು ಗಾಂಧಿ  ಮತ್ತು ವಿನೋಬಾ ಭಾವೆ ಅವರ ಆಶ್ರಮಗಳಲ್ಲಿ ತಮ್ಮ ಜೀವಿತಾವಧಿಯನ್ನು ಕಳೆದರು. ಗಾಂಧೀಜಿ ಮತ್ತು ವಿನೋಬಾ ಭಾವೆ ಅವರ ಪ್ರಭಾವಕ್ಕೆ ಬಂದ  ಹೆಗಡೆ ಅವರು ತಮ್ಮ ' ಬ್ರಾಹ್ಮಣ್ಯ' ವನ್ನು ಬದಿಗಿಟ್ಟು ಆಶ್ರಮದ ಪಾಯಿಖಾನೆ ತೊರೆದಿದ್ದರು. ಹೆಗಡೆ ಅವರ ಸಾರ್ವಜನಿಕ ಜೀವನವನ್ನು ಸಮೀಪದಿಂದ ನೋಡಿದವರು ಹೇಳುವಂತೆ ಅವರು ಎಂದೂ ತಮ್ಮ ನಡೆ, ನುಡಿಗಳಲ್ಲಿ ತಮ್ಮ ಬ್ರಾಹ್ಮಣಿಕೆಯನ್ನು ಪ್ರದರ್ಶಿಸಲಿಲ್ಲ 

ಎಂದೇ ಹೇಳುತ್ತಾರೆ. ನಿನ್ನೆಯ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆ ರಾಮಕೃಷ್ಣ ಹೆಗಡೆ ಅವರು ಅವರ ರಾಜಕೀಯ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ದಲಿತ ನಾಯಕರಾದ ಕಾರಜೋಳ ಮತ್ತು ರಮೇಶ ಜಿಗಜೇವಣಗಿ ಮುಂತಾದವರನ್ನು ಬೆಳೆಸಿದವರು ಹೆಗಡೆಯವರು. ಇಂದು ಬಿಜೆಪಿ ಮತ್ತು ಕಾಂಗ್ರೆಸನಲ್ಲಿರುವ ಹಲವಾರು ನಾಯಕರು ಹೆಗಡೆಯವರ ಒಂದು ಕಾಲದ ಶಿಷ್ಯರು! ಸ್ವತಃ ಹೆಗಡೆಯವರ ಏಕೈಕ ಪುತ್ರ ಕವಿ ನಿಸ್ಸಾರ ಅಹಮದ್ ಅವರ ತಂಗಿಯನ್ನು ಮದುವೆಯಾಗಿದ್ದರು!

ಹೆಗಡೆ ಅವರು ತಮ್ಮ ಜೀವಿತ ಕಾಲದಲ್ಲಿ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ ಎಂಬುದನ್ನು ನಾವು ಗಮನಿಸಲೇಬೇಕು. ಅವರು 2003-2004ರ ಸುಮಾರಿಗೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾಗ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ ಎಂದರೆ ಯಾರೂ ನಂಬುವುದಿಲ್ಲ ! ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣ ಅವರು ಸರ್ಕಾರದ ಖರ್ಚಿನಲ್ಲಿ ಹೆಗಡೆ ಅವರನ್ನು ಚಿಕಿತ್ಸೆಗಾಗಿ 

ಲಂಡನ್ನಿಗೆ ಕಳುಹಿಸಿದ್ದರು. ಅವರ ಮರಣಾನಂತರ ಅವರ ಕುಟುಂಬದ ಖರ್ಚು ವೆಚ್ಚಗಳನ್ನು ಅವರ ಕೆಲ ಆಪ್ತ ಶಿಷ್ಯರು ನೋಡಿಕೊಳ್ಳುತ್ತಾರೆ/ ನೋಡಿಕೊಳ್ಳುತ್ತಿದ್ದರು ಎಂದು ನನಗೆ ಆಪ್ತರಾಗಿದ್ದ ಓರ್ವ ಹೆಸರಾಂತ ನಾಯಕರು ಹೇಳಿದ್ದರು. ನಾನು ಕೇಳಿರುವಂತೆ  ಹೆಗಡೆ ಅವರು ನಿಧನರಾದ ಸಮಯದಲ್ಲಿ ಅವರ ಆಸ್ತಿಯು ಸಿ ವಿ ರಾಮನ್ ಸಂಶೋಧನಾ ಸಂಸ್ಥೆ ಇರುವ ರಸ್ತೆಯಲ್ಲಿರುವ  ' ಕ್ರತ್ತಿಕಾ' ನಿವಾಸ ಮತ್ತು ಬೆಂಗಳೂರು ಆಚೆ ಇರುವ ಒಂದು ತೋಟ ಮಾತ್ರವಾಗಿತ್ತು! ನಾನು ಹೆಗಡೆ ಅವರ ವಿಶೇಷತೆಗಳನ್ನು ಇಂದು ರಾಜಕಾರಣದಲ್ಲಿರುವ ಯಾವ ನಾಯಕರ ಜೊತೆಯೂ ಹೋಲಿಸುವ ತಪ್ಪು ಮಾಡಿ ಅವರ ಕೆಂಗಣ್ಣಿಗೆ ಗುರಿಯಾಗದೇ ಇರಲು ಬಯಸುತ್ತೇನೆ. 


ರಾಮಕೃಷ್ಣ ಹೆಗಡೆ ಎಂಬ ವರ್ಣರಂಜಿತ, ಆಕರ್ಷಣೀಯ, ಸೂಜಿಗಲ್ಲಿನ ವ್ಯಕ್ತಿತ್ವದ ರಾಜಕಾರಣಿ ಇಂದು ನಮ್ಮೊಂದಿಗೆ ಇಲ್ಲ. ಅವರು ನಮ್ಮನ್ನು ಅಗಲಿ ಇಪ್ಪತ್ತೆರಡು ವರ್ಷಗಳು ಆಗಿದ್ದರೆ, ಅವರು ಹುಟ್ಟಿ ನಿನ್ನೆಗೆ ನೂರು ವರ್ಷಗಳಾಯಿತು. ಅವರು ಕೂಡ ನಿಮ್ಮ, ನಮ್ಮಂತೆಯೇ ಸಾಧಾರಣ ಮನುಷ್ಯರಂತೆ ಅನೇಕ ದೌರ್ಬಲ್ಯಗಳನ್ನು ಹೊಂದಿದ್ದರು. ಆದರೆ, ತಮ್ಮ ಕೆಲ ಉನ್ನತ ವಿಚಾರಗಳು, ಉದಾತ್ತ ವ್ಯಕ್ತಿತ್ವ ಮತ್ತು ಪ್ರಗತಿಪರ ಕ್ರಮಗಳಿಂದಾಗಿ ಅವರು ದೊಡ್ಡ ನಾಯಕರಾಗಿ ಬೆಳೆದಿದ್ದಾರೆ ಎಂದು ನಾವು ಪಕ್ಷಾತೀತವಾಗಿ ಒಪ್ಪಿಕೊಳ್ಳಲೇಬೇಕು. ಕರ್ನಾಟಕ ಮತ್ತು ದೇಶವು ಅವರ ಕೊಡುಗೆಯನ್ನು ಮುಂದಿನ ದಿನಗಳಲ್ಲೂ ನೆನಪಿಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ರಾಮಕೃಷ್ಣ ಹೆಗಡೆ ಅವರು ಎಷ್ಟು ಬೇಗ ರಾಜಕೀಯವಾಗಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದರೋ ಅಷ್ಟೇ ವೇಗವಾಗಿ ರಾಜಕೀಯವಾಗಿ ಕೆಳಗಿಳಿದುದು ಕೂಡ ಅಷ್ಟೇ ಸತ್ಯ. ಅವರು 1988 ರಲ್ಲಿ ಮುಖ್ಯ ಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತಲೇ ಆವರ ಅವನತಿಯ ದಿನಗಳು ಪ್ರಾರಂಭವಾದುವು ಎನ್ನಬಹುದು. ಅವರ ರಾಜಕೀಯ ಅವರೋಹಣಕ್ಕೆ ಅವರು ಮತ್ತು ದೇವೇಗೌಡರ ಮಧ್ಯೆ ಇರುವ ಸಂಘರ್ಷವು ಬಹುಮಟ್ಟಿಗೆ ಕಾರಣವಾಗಿತ್ತು. ದೇವೇಗೌಡರು 1989 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದರೂ ಕೂಡ ತಮ್ಮ ಜಿಗುಟುತನ ಹಾಗೂ ಹೋರಾಟದ ಮನೋಭಾವದಿಂದಾಗಿ 

ಪ್ರಧಾನಿಯಾದರು. ಅವರು ಪ್ರಧಾನಿ ಆಗುತ್ತಲೇ ಅಂದು ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಲಾಲು ಪ್ರಸಾದ ಯಾದವ ಅವರು ಹೆಗಡೆ ಅವರನ್ನು ಪಕ್ಷದಿಂದ ಹೊರ ಹಾಕಿದರು.ಅಲ್ಲಿಗೆ ಹೆಗಡೆ ಅವರ ಅವನತಿಯ ಸುತ್ತು ಪೂರ್ತಿಯಾಗಿತ್ತು. ನಂತರ ಅವರು ಲೋಕಶಕ್ತಿ ಸ್ಥಾಪಿಸಿ ವಾಜಪೇಯಿ ಅವರ ಕೇಂದ್ರ ಸರ್ಕಾರದಲ್ಲಿ ಸಚಿವರಾದರೂ ಕೂಡ ಹೆಗಡೆಯವರ ' ಪ್ರಾಚೀನ ವೈಭವ ' ಮತ್ತೆ ಮರುಕಳಿಳಿಸಲಿಲ್ಲ. 

ಹೀಗೆ, ಲೋಕ ನಾಯಕ ರಾಮಕೃಷ್ಣ ಹೆಗಡೆ ಅವರು ರಾಜಕೀಯವಾಗಿ ಸೋತರು, ಆದರೆ ಐತಿಹಾಸಿಕವಾಗಿ ಗೆದ್ದರು!

ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ವಿಷಯ 

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ